ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ: ಆನ್‌ಲೈನ್ ಮೂಲಕ ವಲಸೆ ಪ್ರಮಾಣ ಪತ್ರ ಪಡೆಯಲು ಅವಕಾಶ

Update: 2019-08-04 14:57 GMT

ಬೆಂಗಳೂರು, ಆ.4: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಆನ್‌ಲೈನ್ ಮೂಲಕವೇ ವಲಸೆ ಪ್ರಮಾಣಪತ್ರ ನೀಡಲು ಮುಂದಾಗಿದ್ದು, ಇತ್ತೀಚಿಗೆ ಎಸೆಸೆಲ್ಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಲಿದೆ.

ಅತ್ಯಂತ ಸುಲಭವಾಗಿ ವಲಸೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಬೇಕು ಎಂಬ ಉದ್ದೇಶದಿಂದ ಪರೀಕ್ಷಾ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ. ಪ್ರಸಕ್ತ ಸಾಲಿನಲ್ಲಿ(2019-20)ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪ್ರಮಾಣಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಪ್ರೌಢಶಿಕ್ಷಣ ಮುಗಿಸಿ, ಇಲ್ಲಿಯೇ ಪದವಿ ಪೂರ್ವ ಶಿಕ್ಷಣ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲ್ಲ. ಆದರೆ, ಇಲ್ಲಿ ಎಸೆಸೆಲ್ಸಿ ಮುಗಿಸಿ, ಬೇರೊಂದು ರಾಜ್ಯದಲ್ಲಿ ಪಿಯುಸಿ ವ್ಯಾಸಾಂಗ ಮಾಡಲು ಬಯಸುವವರಿಗೆ ವಲಸೆ ಪ್ರಮಾಣ ಪತ್ರ ಅಗತ್ಯವಾಗಿದೆ. ಈ ಪ್ರಮಾಣ ಪತ್ರವಿಲ್ಲದಿದ್ದರೆ ಬೇರೆ ರಾಜ್ಯದಲ್ಲಿ ಇಲ್ಲಿನ ವಿದ್ಯಾರ್ಥಿಗಳು ವ್ಯಾಸಾಂಗ ಮಾಡಲು ಕಷ್ಟಕರವಾಗುತ್ತದೆ. ಆದುದರಿಂದಾಗಿ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ.

ವಲಸೆ ಪ್ರಮಾಣ ಪತ್ರ ಬೇಕಾಗಿರುವ ವಿದ್ಯಾರ್ಥಿಗಳು ಮಂಡಳಿಯ ವೆಬ್‌ಸೈಟ್ http://www.kseeb.kar.nic.in ನ ಮೂಲಕ ಅರ್ಜಿ ಸಲ್ಲಿಸಬೇಕು. ಮಂಡಳಿ ನಿಗಧಿ ಮಾಡಿರುವ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು. ಅಲ್ಲದೆ, ಶುಲ್ಕವನ್ನು ಚಲನ್ ಡೌನ್‌ಲೋಡ್ ಮಾಡಿಕೊಂಡು ಆಫ್‌ಲೈನ್ ಮೂಲಕವೂ ಶುಲ್ಕ ಪಾವತಿಸಬಹುದು. ಶುಲ್ಕ ಪಾವತಿಸಿದ ನಂತರ ಆನ್‌ಲೈನ್ ಮೂಲಕ ಪ್ರಮಾಣಪತ್ರವನ್ನು ಡೌನ್‌ಲೋಡ್‌ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಈ ಪ್ರಮಾಣ ಪತ್ರ ಅನುಕೂಲಕರವಾಗಲಿದೆ. ಪ್ರತಿ ವರ್ಷ ಒಂದೊಂದು ಜಿಲ್ಲೆಯಿಂದ ಸಾವಿರಾರು ಅರ್ಜಿಗಳು ಬರುತ್ತವೆ. ವಿದ್ಯಾರ್ಥಿಗಳು ಶಾಲೆಯಿಂದ ಶಾಲೆಗೆ ಅಲೆಯಬೇಕಿರುತ್ತದೆ. ಹೀಗಾಗಿ, ಈ ಬಾರಿ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಜತೆ ಪರಿಶೀಲನೆ: ಆನ್‌ಲೈನ್ ಮೂಲಕ ನೀಡುವ ಪ್ರಮಾಣಪತ್ರವು ನಕಲಿಯೋ ಅಥವಾ ಅಸಲಿಯೋ ಎಂದು ಪರಿಶೀಲಿಸಲು ಅವಕಾಶವೂ ಇದೆ. ಅಭ್ಯರ್ಥಿಯು ಪಡೆಯುವ ಪ್ರಮಾಣಪತ್ರಕ್ಕೆ ನೀಡಲಾಗುವ ಕ್ಯೂ ಆರ್ ಕೋಡ್ ಅನ್ನು ಸ್ಕಾನ್ ಮಾಡುವುದರಿಂದ ಈ ಪತ್ರವು ಮಂಡಳಿಯಿಂದಲೇ ಬಂದಿದೆ ಎಂಬ ಸಂದೇಶ ಬರುತ್ತದೆ. ಇದು ನೈಜತೆಯನ್ನು ಪರಿಶೀಲಿಸಲು ಮಾಡಲಾಗಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಕರ್ನಾಟಕದಲ್ಲಿ ಅನೇಕ ಜಿಲ್ಲೆಗಳು ಬೇರೆ ಬೇರೆ ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಈ ಭಾಗಗಳಲ್ಲಿನ ವಿದ್ಯಾರ್ಥಿಗಳು ಪ್ರೌಢಶಿಕ್ಷಣ ಮುಗಿಸಿದ ಬಳಿಕ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ವಲಸೆ ಪ್ರಮಾಣ ಪತ್ರ ಅತ್ಯಗತ್ಯವಾಗಿರುತ್ತದೆ. ಆದುದರಿಂದ ಆನ್‌ಲೈನ್ ಮೂಲಕ ನೀಡುವ ಹೊಸ ವ್ಯವಸ್ಥೆ ಜಾರಿ ಮಾಡಿದ್ದೇವೆ.

- ವಿ.ಸುಮಂಗಲಾ, ನಿರ್ದೇಶಕಿ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News