ಮೌಢ್ಯಪ್ರತಿಬಂಧಕ ಕಾಯ್ದೆಗೆ ಜಾಗೃತಾಧಿಕಾರಿಗಳ ನೇಮಕ

Update: 2019-08-04 15:01 GMT

ಬೆಂಗಳೂರು, ಆ.4: ರಾಜ್ಯಾದ್ಯಂತ ಮೌಢ್ಯ ಪ್ರತಿಬಂಧಕ ಕಾಯ್ದೆಗೆ ಜಾಗೃತಾಧಿಕಾರಿಯಾಗಿ ಎಲ್ಲ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೌಢ್ಯ ಪದ್ಧತಿಗಳ ನಿಷೇಧಕ್ಕಾಗಿ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನಾ ಅಧಿನಿಯಮ-2017 ಕಾಯ್ದೆ ಜಾರಿ ಮಾಡಿದ್ದರು.

ಇದೀಗ ರಾಜ್ಯ ಸರಕಾರ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದು, ರಾಜ್ಯದಲ್ಲಿನ ವಿಶೇಷ ಪೊಲೀಸ್ ಠಾಣೆಗಳನ್ನು ಹೊರತುಪಡಿಸಿ ಎಲ್ಲ ಠಾಣೆಗಳನ್ನು ಮೌಢ್ಯ ನಿಷೇಧ ನಿರ್ಬಂಧಕ ಠಾಣೆಗಳು ಎಂದು ಗುರುತಿಸಲಾಗಿದೆ. ಅಲ್ಲಿನ ಇನ್‌ಸ್ಪೆಕ್ಟರ್‌ಗಳನ್ನು ಠಾಣಾ ಸಹರದ್ದಿನ ಜಾಗೃತಾಧಿಕಾರಿಯಾಗಿ ನೇಮಕ ಮಾಡಿ ಸರಕಾರ ಅಧಿಸೂಚನೆ ಹೊರಡಿಸಿದೆ.

ಸಮಾಜದಲ್ಲಿನ ಕಂದಾಚಾರಗಳು, ಅಮಾನವೀಯ ಆಚರಣೆ ಹಾಗೂ ಸುಲಿಗೆಗಳು ತಡೆಯಬೇಕು ಎಂದು ಮಠಾಧೀಶರು, ಪ್ರಗತಿಪರ ಸಂಘಟನೆಗಳು ಹಾಗೂ ಸಾಹಿತಿಗಳು ತೀವ್ರ ಹೋರಾಟ ಮಾಡಿದ ನಂತರ ಹಿಂದಿನ ರಾಜ್ಯ ಸರಕಾರ ಈ ಕಾಯ್ದೆ ಜಾರಿ ಮಾಡಿತು. ವಿಧಾನಸಭೆಯ ಉಭಯ ಸದನಗಳಲ್ಲಿಯೂ ಚರ್ಚೆ ನಡೆದು, ಕೊನೆಗೆ ಮೂಲ ಉದ್ದೇಶಿತ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ತಂದು ಸದನದಲ್ಲಿ ಅಂಗೀಕರಿಸಲಾಯಿತು.

ಈ ಕಾಯ್ದೆಗೆ ರಾಷ್ಟ್ರಪತಿಯೂ ಅಂಕಿತ ಹಾಕಿದ್ದು, ಇದೀಗ ಮೌಢ್ಯ ನಿರ್ಬಂಧಿಸುವ ಹೊಣೆಗಾರಿಕೆ ಪೊಲೀಸರ ಹೆಗಲಿಗೆ ಹೊರಸಲಾಗಿದೆ. ಕಾಯ್ದೆ ಉಲ್ಲಂಘಿಸಿದವರಿಗೆ ಒಂದರಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ, 5 ರಿಂದ 50 ಸಾವಿರದವರೆಗೆ ದಂಡ ವಿಧಿಸಲು ನ್ಯಾಯಾಲಯಕ್ಕೆ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News