×
Ad

ಗೌಡರ ಕುಟುಂಬ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಿದೆಯೇ?: ಹೆಚ್ಡಿಕೆ 'ರಾಜಕೀಯ ನಿವೃತ್ತಿ' ಹೇಳಿಕೆಗೆ ಶೆಟ್ಟರ್ ಲೇವಡಿ

Update: 2019-08-04 20:35 IST

ಹುಬ್ಬಳ್ಳಿ, ಆ.4: ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದವರು ಇದುವರೆಗೆ ಎಂದಾದರೂ ಹೇಳಿದಂತೆ ನಡೆದುಕೊಂಡಿದ್ದಾರೆಯಾ?, ಅವರು ಹೇಳುವುದೊಂದು ಮಾಡುವುದೊಂದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

ರವಿವಾರ ಇಂದಿಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂದರ್ಭ, ಮಾಜಿ ಸಿಎಂ ಕುಮಾರಸ್ವಾಮಿ ರಾಜಕೀಯ ನಿವೃತ್ತಿ ಪಡೆಯುತ್ತಾರೆ ಎಂಬ ವಿಷಯದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇವೇಗೌಡ ಮತ್ತು ಕಂಪೆನಿ ಹೇಳಿಕೆಯನ್ನು ಯಾವುದೇ ರೀತಿಯಲ್ಲೂ ಸೀರಿಯಸ್ ಆಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದರು.

ಮಾಜಿ ಪ್ರಧಾನಿ ದೇವೆಗೌಡ ಸೇರಿದಂತೆ ಅವರ ಪುತ್ರರು, ಪೂರ್ಣ ಕುಟುಂಬ ಎಂದಾದರೂ ಹೇಳಿದಂತೆ ನಡೆದುಕೊಂಡಿದೆಯೇ? ಈ ಹಿಂದೆ ಮೋದಿ ಪ್ರಧಾನಿಯಾದರೆ ದೇಶ ಬಿಡುವೆ ಎಂದು ಹೇಳಿದ್ದ ದೇವೇಗೌಡರು ಇಂದು ದೇಶದಲ್ಲಿಯೇ ಇದ್ದಾರೆ. ಅಲ್ಲದೆ, ಅವರ ಕುಟುಂಬದ ಅನೇಕರು ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಯಾವುದನ್ನೂ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.

ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳು ಮತ್ತು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು. ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಡಿಸಿಎಂ ಸ್ಥಾನವನ್ನು ನೇಮಕ ಮಾಡುವ ವಿಚಾರವೂ ಹೈಕಮಾಂಡಗೆ ಬಿಟ್ಟಿದ್ದು, ಅದಲ್ಲದೆ ಉತ್ತರ ಕರ್ನಾಟಕದ ಯಾವ ಯಾವ ಶಾಸಕರಿಗೆ ಸಚಿವ ಸ್ಥಾನವನ್ನು ನೀಡಬೇಕೆಂಬುದು ಸಿಎಂ ಅವರ ವಿವೇಚನೆ ಎಂದರು. 

ಹೊಸ ಪಕ್ಷವೇ ಹುಟ್ಟಬಹುದು

ಅತೃಪ್ತ ಶಾಸಕರೆಲ್ಲ ಸೇರಿ ಹೊಸ ಪಕ್ಷವನ್ನೇ ಹುಟ್ಟು ಹಾಕಲೂಬಹುದು. ಅವರೆಲ್ಲ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಿದ್ದಾರೆ. ಅತೃಪ್ತರೊಂದಿಗೆ ನಮ್ಮ ನಾಯಕರು ಮಾತಾಡಿದ್ದಾರೆ. ಅಷ್ಟು ಮಾತ್ರಕ್ಕೆ ಅವರ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಲಾಗದು.

- ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News