ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ: ಶಾಸಕ ಎನ್.ಮಹೇಶ್

Update: 2019-08-04 16:30 GMT

ಚಾಮರಾಜನಗರ, ಆ.4: ನಾನೇನು ತರಕಾರಿನಾ ಮಾರಾಟ ಆಗೋಕೆ. ಕಮ್ಯುನಿಕೇಷನ್ ಗ್ಯಾಪ್‍ನಿಂದಾಗಿ ಪಕ್ಷದ ವರಿಷ್ಟೆ ಮಾಯಾವತಿಯವರ ಆದೇಶ ತಿಳಿಯಲಾಗಿಲ್ಲ. ಹೀಗಾಗಿ ಮೈತ್ರಿ ಸರ್ಕಾರದ ಬಹುಮತ ಸಾಬೀತು ವೇಳೆ ಸದನದಿಂದ ದೂರ ಉಳಿದೆ ಎಂದು ಬಿಎಸ್ಪಿ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.

ಜಿಲ್ಲೆಯ ಕೊಳ್ಳೇಗಾಲದ ತಮ್ಮ ನಿವಾಸದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಎನ್.ಮಹೇಶ್, ಪಕ್ಷದ ವರಿಷ್ಟೆ ಮಾಯಾವತಿಯವರು ಮೈತ್ರಿ ಸರ್ಕಾರ ಬಹುಮತ ವೇಳೆ ತಟಸ್ಥ ನಿಲುವಿನಿಂದ ಇರುವಂತೆ ಸೂಚನೆ ನೀಡಿದ್ದರು.ಅದರಂತೆ ತಟಸ್ಥನಾಗಿದ್ದೆ ಹಾಗೂ ಬಹುಮತ ಮೈತ್ರಿ ಸರ್ಕಾರದ ಬಹುಮತ ಸಾಬೀತಿನ ಮುಂಚೆ ತಮಿಳುನಾಡಿನ ಕೊಯಮತ್ತೂರಿನ ಈಶ ಪೌಂಡೇಶನ್‍ಗೆ ತೆರಳಿದ್ದೆ. ಅಲ್ಲಿ ಯಾವುದೇ ಪೋನ್‍ಗಳ ಸಂಪರ್ಕ ಸಿಗುತ್ತಿರಲಿಲ್ಲ ಎಂದು ಹೇಳಿದರು.

ಅಲ್ಲಿಂದ ಬೆಂಗಳೂರಿಗೆ ಬಂದ ನಂತರ ಪತ್ರಿಕೆಗಳಲ್ಲಿ ತನನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ಸಂಗತಿ ತಿಳಿಯಿತು. ಆದರೆ ನಾನೆಂದೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಹಾಗೂ ಮಾಯಾವತಿಯವರ ನಿದೇರ್ಶನದಂತೆ ನಡೆದುಕೊಂಡಿದ್ದೇನೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪರವರ ಭೇಟಿಗಾಗಿ ಅವರ ಕಚೇರಿಗೆ ತೆರಳಿ ಹೂಗುಚ್ಚ ನೀಡಿರುವುದು ರಾಜಕೀಯವಾಗಿ ಅಲ್ಲ. ನಾನೆಂದೂ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಹಾಗೂ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯೂ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಬಿಎಸ್‍ಪಿ ರಾಜ್ಯ ಉಸ್ತುವಾರಿ ಹೊತ್ತಿರುವವರು ತನ್ನನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್ ಗೆ ಪತ್ರ ಬರೆದಿದ್ದಾರೆ. ಅದು ಸ್ಪೀಕರ್ ಅಂಗಳದಲ್ಲಿದೆ. ಮುಂದೆ ಏನಾಗುತ್ತೋ ನೋಡೋಣ. ಕ್ಷೇತ್ರದಲ್ಲಿ ತಮ್ಮ ಕಾರ್ಯಕರ್ತರ ಸಭೆಯನ್ನು ಕರೆದು ಚರ್ಚೆ ನಡೆಸಿದ ಬಳಿಕ ಅಲ್ಲಿ ಯಾವ ನಡೆಯ ಬಗ್ಗೆ ನಿರ್ಧಾರವಾಗುತ್ತೋ ಅದರಂತೆ ಇರುತ್ತೇನೆ ಎಂದು ಹೇಳಿದರು.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಅವಹೇಳಕಾರಿ ಹೇಳಿಕೆಗಳು ಬರುತ್ತಿದೆ. ಇದರಿಂದ ಮನಸ್ಸಿಗೆ ಭಾರಿ ನೋವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News