ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆ: ವಾಟಾಳ್ ನಾಗರಾಜ್ ಬಂಧನ

Update: 2019-08-04 17:02 GMT

ಮಂಡ್ಯ, ಆ.4: ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕೃಷ್ಣರಾಜಸಾಗರ(ಕೆಆರ್‍ಎಸ್) ಜಲಾಶಯದ ಬಳಿ ಮಲಗಿ ಪ್ರತಿಭಟಿಸಿದ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ರವಿವಾರ ಬಂಧಿಸಿದರು.

ಕಾರ್ಯಕರ್ತರ ಜೊತೆ ಜಲಾಶಯದ ಬಳಿಗೆ ಬಂದ ವಾಟಾಳ್ ನಾಗರಾಜ್, ಜಲಾಶಯದಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ, ಮುಖ್ಯ ದ್ವಾರದ ಬಳಿ ಮಲಗಿ ವಿನೂತನ ಪ್ರತಿಭಟನೆ ನಡೆಸಿದರು.

ನಂತರ, ಜಲಾಶಯದ ಕಡೆಗೆ ತೆರಳಲು ಯತ್ನಿಸಿದ ಅವರನ್ನು ಪೊಲೀಸರು ತಡೆದರು. ಆದರೆ, ಅವರು ರಾಜ್ಯ ಸರಕಾರ ಮತ್ತು ಕಾವೇರಿ ನದಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಕರ್ನಾಟಕದ ರೈತರಿಗೆ ನೀರಿಲ್ಲದಂತಹ ಸಂದರ್ಭದಲ್ಲಿ ತಮಿಳುನಾಡಿಗೆ ಜಲಾಶಯದಿಂದ ನೀರು ಹರಿಸುವ ಪ್ರಮೇಯ ಏನಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಭಯ ರಾಜ್ಯಗಳ ನಡುವೆ ಕಾವೇರಿ ನದಿ ವಿವಾದ ಹೊಸದೇನಲ್ಲ. ಪ್ರತಿಭಟನೆಯೂ ಹೊಸದಲ್ಲ. ಆದರೆ, ನ್ಯಾಯಯುತ ಪರಿಹಾರವಷ್ಟೆ ಅಂತಿಮ ಗುರಿ ಎಂದು ಅವರು ಹೇಳಿದರು.

ಕಾವೇರಿ ಪ್ರಾಧಿಕಾರದ ರಚನೆ ರಾಜ್ಯಕ್ಕೆ ಮರಣ ಶಾಸನ. ಅದನ್ನು ವಿರೋಧಿವುದಾಗಿ ಹೇಳಿ ಹಿಂದಿನ ಸರಕಾರ ಹೇಳಿತ್ತು. ಈಗ ನಮ್ಮ ಅಧಿಕಾರಿಗಳನ್ನೇ ಪ್ರಾಧಿಕಾರದ ಸಭೆಗೆ ಕಳುಹಿಸುತ್ತಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಪ್ರಾಧಿಕಾರ ನಿರಂತರವಾಗಿ ತಮಿಳುನಾಡಿಗೆ ನೀರು ಬಿಡುವಂತೆ ಸ್ರಚಿಸುತ್ತಿದೆ. ಕೇಂದ್ರ ಸರಕಾರ ಪ್ರಾಧಿಕಾರ ತಮಿಳುನಾಡಿನ ಕೈಗೊಂಬೆಯಾಗಿದೆ.
ತಮಿಳುನಾಡಿನ ಹಿತಕ್ಕಾಗಿ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದೆ. ನೀರು ಬಿಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಕಿಡಿಕಾರಿದರು. ಅಣೆಕಟ್ಟು, ಕೆರೆ, ಕಟ್ಟೆಗಳಲ್ಲೂ ನೀರಿಲ್ಲ. ಅಂತಹದಲ್ಲಿ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ಹೇಳಿದೆ. ಈ ಆದೇಶವನ್ನು ರಾಜ್ಯ ಸರಕಾರ ಒಪ್ಪಬಾರದು. ಯಾವ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಅವರು ತಾಕೀತು ಮಾಡಿದರು.

ವಾರದೊಳಗೆ ಮೇಕೆದಾಟು ಯೋಜನೆ ರಾಜ್ಯ ಸರಕಾರ ಆರಂಭಸದಿದ್ದರೆ ನಾವೇ ಶಂಕುಸ್ಥಾಪನೆ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.

ಟಿಪ್ಪು ಸುಲ್ತಾನ್ ದೇಶ ಕಂಡ ಅಪ್ರತಿಮ ವೀರ. ಪಾರ್ಲಿಮೆಂಟ್ ಮುಂದೆ ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸಬೇಕು. ಟಿಪ್ಪು ಜಯಂತಿ ರದ್ದತಿ ಆದೇಶ ಹಿಂಪಡೆಯಬೇಕು.

-ವಾಟಾಳ್ ನಾಗರಾಜ್, ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News