ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮುಂದೆ ಸವಾಲಿನ ಜೊತೆಗೆ, ಅವಕಾಶಗಳೂ ಇವೆ: ಡಾ.ಸುಧೀರ್ ಕಾಮತ್

Update: 2019-08-04 17:07 GMT

ತುಮಕೂರು,ಆ.4: ಪ್ರತಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಮುಂದೆ ಸವಾಲುಗಳು ಇರುವ ರೀತಿ ಅವಕಾಶಗಳು ಇವೆ. ಕಲಿಕೆಯ ಜೊತೆಗೆ ಕೌಶಲ್ಯವನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ನವದೆಹಲಿಯ ಮೈಕ್ರೋ ಎಲೆಕ್ಟ್ರಾನಿಕ್ಸ್ ಡಿವೈಸಸ್ ನ ಡೈರೆಕ್ಟರ್ ಜನರಲ್ಲಿ ಡಾ.ಸುಧೀರ್ ಕಾಮತ್ ತಿಳಿಸಿದ್ದಾರೆ.

ನಗರದ ಸಿದ್ದಗಂಗ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹತ್ತನೇ ಪದವಿ ಪ್ರಧಾನ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಇಂಜಿನಿಯರಿಂಗ್ ಮತ್ತು ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪ್ರಯೋಗಿಸಲು ಇಂದು ನಿಮಗೆ ಹೊರಗೆ ಅಪಾರವಾದ ಅವಕಾಶಗಳಿವೆ. ನೀವು ಇಂಜಿನಿಯರಿಂಗ್, ವಾಸ್ತುಶಿಲ್ಪ, ಮ್ಯಾನೇಜ್ಮೆಂಟ್ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಿಂದ ಪದವಿ ಪಡೆಯುತ್ತಿದ್ದು, ನಿಮ್ಮ ಆಯ್ಕೆ ಬಗ್ಗೆ ಅನುಮಾನ ಬೇಡ. ಹೊರಗೆ ಸಿಗುವ ಅವಕಾಶಗಳ ಬಗ್ಗೆ ನಿಮ್ಮ ಮನಸ್ಸು ಗೊಂದಲದ ಗೂಡಾಗುವುದು ಬೇಡ. ಎಲ್ಲಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಹುಮುಖ ಕೌಶಲ್ಯಗಳು ಅಗತ್ಯವಾಗಿದ್ದು, ಜ್ಞಾನ ಮತ್ತು ಕೌಶಲ್ಯಗಳ ಪರಿಪೂರ್ಣ ಮಿಶ್ರಣವಾಗಿ ನೀವು ರೂಪಗೊಳ್ಳಬೇಕಿದೆ ಎಂದರು. 

ಪದವಿ ಎಂಬುದು ಜೀವನದ ಒಂದು ಮೈಲಿಗಲ್ಲು, ಇದನ್ನು ಸಾಧಿಸಿದ ಹೆಮ್ಮೆ ನಿಮಗಿರಲಿ. ಇಲ್ಲಿ ಗಳಿಸಿದ ಅನುಭವ ಮತ್ತು ಜ್ಞಾನವು ಉತ್ತಮ ಹಾಗೂ ಫಲಪ್ರದವಾಗಿ ನಾಳಿನ ನಿಮ್ಮ ಭವಿಷ್ಯ ರೂಪಿಸಲಿ. ಕಲಿಕೆ ಶಾಶ್ವತ ಪ್ರಕ್ರಿಯೆಯಾಗಿರುವುದರಿಂದ ನಿಮ್ಮ ಜೀವನದ ಪ್ರತಿಕ್ಷಣವನ್ನು ಉಪಯೋಗಿಸಿಕೊಂಡು ಹೆಚ್ಚಿನ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ. ತಮ್ಮ ನಿಯಂತ್ರಣವನ್ನು ಮೀರಿದ ಕೆಲವು ಕಾರಣಗಳಿಂದಾಗಿ ಅವರ ನಿರೀಕ್ಷೆಗಳನ್ನು ನನಸುಮಾಡಿಕೊಳ್ಳದ ವಿದ್ಯಾರ್ಥಿಗಳಿಗೆ ನಿರಾಶೆ ಒಳಗಾಗುವ ಅಗತ್ಯವಿಲ್ಲ. ನಿಮ್ಮ ಸಾಧನೆಗೆ ಶೈಕ್ಷಣಿಕ ಫಲಿತಾಂಶವೊಂದೇ ಮಾನದಂಡವಲ್ಲ. ಜ್ಞಾನ, ತಾಳ್ಮೆ ಮತ್ತು ಕಠಿಣ ಪರಿಶ್ರಮಗಳು ಯಶಸ್ವಿಗೆ ಅಡಿಪಾಯವನ್ನು ರೂಪಿಸುತ್ತವೆ. ಜೀವನವನ್ನು ಗೆಲ್ಲುವ ನಿಮ್ಮ ಅನ್ವೇಷಣೆ ಈಗ ಪ್ರಾರಂಭವಾಗುತ್ತಿದೆ ಎಂದು ಡಾ.ಸುಧೀರ್ ಕಾಮತ್ ನುಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮಿಜಿ ವಹಿಸಿದ್ದರು. ವೇದಿಕೆಯಲ್ಲಿ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ನಿರ್ದೇಶಕರಾದ ಡಾ.ಎಂ.ಎನ್.ಚನ್ನಬಸವಯ್ಯ, ಸಿಇಓ ಡಾ.ಶಿವಕುಮಾರಯ್ಯ, ಪ್ರಾಂಶುಪಾಲರಾದ ಡಾ.ಶಿವಾನಂದ್, ಆಡಳಿತ ಮಂಡಳಿ ಸದಸ್ಯರು ಹಾಗೂ ಅಧ್ಯಾಪಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News