ಶೃಂಗೇರಿ: ಸೆಕ್ಷನ್ 17ರ ಮೀಸಲು ಅರಣ್ಯ ಅಧಿಸೂಚನೆ ಕೈಬಿಡಲು ಆಗ್ರಹಿಸಿ ಮನವಿ

Update: 2019-08-04 17:15 GMT

ಶೃಂಗೇರಿ, ಆ.4: ತಾಲೂಕಿನ ಕೂತಗೋಡು ಗ್ರಾಪಂ ವ್ಯಾಪ್ತಿಯ ಬೆಟ್ಟಗೆರೆ, ಕೊಚ್ಚವಳ್ಳಿ, ಗುಂಡ್ರೆ ಮೊದಲಾದ ಗ್ರಾಮಗಳಲ್ಲಿನ 644 ಎಕರೆ ಅರಣ್ಯ ಪ್ರದೇಶವನ್ನು ಸೆಕ್ಷನ್ 17ರ ಅಡಿಯಲ್ಲಿ ಮೀಸಲು ಅರಣ್ಯವಾಗಿಸುವ ಅಧಿಸೂಚನೆಯ ಪ್ರಸ್ತಾವ ಕೈಬಿಡುವಂತೆ ಕೋರಿ ಗ್ರಾಪಂ ಅಧ್ಯಕ್ಷ ಕೊಚ್ಚವಳ್ಳಿ ನಾಗೇಶ್ ನೇತೃತ್ವದ ನಿಯೋಗ ಚಿಕ್ಕಮಗಳೂರು ಜಿಲ್ಲಾ ಉಪವಿಭಾಗಾಧಿಕಾರಿ ಶಿವಕುಮಾರ್ ಅವರನ್ನು ಆಗ್ರಹಿಸಿ ಮನವಿ ಸಲ್ಲಿಸಿದೆ.

ಕೂತಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟ್ಟಗೆರೆ ಗ್ರಾಮದ 386 ಎಕರೆ, ಕೊಚ್ಚವಳ್ಳಿ ಬ್ಲಾಕ್‍ನ 269 ಎಕರೆ, ಗುಂಡ್ರೆ ಗ್ರಾಮದ 90 ಎಕರೆ ಅರಣ್ಯ ಪ್ರದೇಶವನ್ನು ಪರಿಶೀಲಿಸಿ ಸೆಕ್ಷನ್ 17ರ ಅಡಿಯಲ್ಲಿ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳುವಂತೆ ಸರಕಾರದಿಂದ ಬಂದಿರುವ ತಿಳುವಳಿಕೆಯನ್ನು ಗ್ರಾಮ ಪಂಚಾಯತ್‍ನಲ್ಲಿ ಸಭೆಯಲ್ಲಿ ಮಂಡಿಸಲಾಗಿತ್ತು. ಪಂಚಾಯತ್ ಆಡಳಿತವು ಗ್ರಾಮದ ನಿವಾಸಿಗಳ ಹಿತದೃಷ್ಟಿಯಲ್ಲಿ ಮೀಸಲು ಅರಣ್ಯ ನಕ್ಷೆ ತಯಾರಿಸಿರುವುದು ತಪ್ಪಾಗಿದೆ. ಇದು ಜನರ ನಿತ್ಯ ಜೀವನಕ್ಕೆ ಮಾರಕ ಕ್ರಮವಾಗಿರುವುದರಿಂದ ಪ್ರಸ್ತಾವವನ್ನು ಕೈಬಿಡುವಂತೆ ಉಪ ವಿಭಾಗಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ನಿರ್ಣಯಿಸಲಾಗಿತ್ತು. 

ಅಂದು ಸಭೆಯಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಈಗ ತಯಾರಿಸಿರುವ ನಕ್ಷೆಯು ಅಂತಿಮವಲ್ಲ, ಮಾನ್ಯ ಉಪ ವಿಭಾಗಾಧಿಕಾರಿಗಳಿಗೆ ಅಹವಾಲು ಸಲ್ಲಸಿದಲ್ಲಿ ಅವರು ಸ್ಥಳ ಹಾಗೂ ದಾಖಲೆಗಳ ಪರಿಶೀಲನೆ ಮಾಡಿ, ಹೊಸ ಕ್ರಮ ಕೈಗೊಳ್ಳಲು ಅವಕಾಶ ಇರುತ್ತದೆ ಎಂದು ಸಮಾಧಾನಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಚಿಕ್ಕಮಗಳೂರಿಗೆ ತೆರಳಿದ ನಿಯೋಗದಿಂದ ಉಪವಿಭಾಗಾಧಿಕಾರಿಗಳಿಗೆ ಗ್ರಾಮಸ್ಥರ ಅಹವಾಲನ್ನು ಸಲ್ಲಿಸಿ, ಪ್ರಸ್ತಾವ ಕೈಬಿಡುವಂತೆ ಕೋರಲಾಯಿತು. 

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಶಿವಕುಮಾರ್ ಮಾತನಾಡಿ, ನಕ್ಷೆ ತಯಾರಿಯಿಂದ ತೊಂದರೆಗೆ ಒಳಗಾಗುವ ರೈತರ ನೈಜ ಅಹವಾಲನ್ನು ಪಂಚಾಯತ್ ಮಟ್ಟದಲ್ಲೇ ಪರಿಶೀಲಿಸಿ ಅವರುಗಳಿಗೆ ಎಷ್ಟು ಪ್ರಮಾಣದ ನ್ಯಾಯ ದೊರಕಿಸಲು ಸಾಧ್ಯವೋ ಅದನ್ನು ಕಾರ್ಯಗತ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. 

ನಿಯೋಗದಲ್ಲಿ ನಾಗೇಶ್ ಅವರೊಂದಿಗೆ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ಭಟ್, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಚಂದ್ರಮತಿ ತಿಮ್ಮಪ್ಪ, ಪಿ.ಸಿ.ಎ.ಆರ್.ಡಿ. ನಿರ್ದೇಶಕ ಚನ್ನಕೇಶವ, ಗ್ರಾಮ ಪಂಚಾಯತ್ ಸದಸ್ಯ ನಾರಾಯಣ, ಗುಂಡ್ರೆ ಶ್ರೀನಾಥ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News