ಜಮ್ಮು-ಕಾಶ್ಮೀರ ವಿಶೇಷಾಧಿಕಾರ ರದ್ದು: ಕೇಂದ್ರದ ನಿರ್ಧಾರ ದೇಶದ ಭವಿಷ್ಯಕ್ಕೆ ಮಾರಕ- ದಿನೇಶ್ ಗುಂಡೂರಾವ್

Update: 2019-08-05 13:25 GMT

ಬೆಂಗಳೂರು, ಆ. 5: ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370 ಹಿಂಪಡೆಯುವುದು ಅತ್ಯಂತ ಸೂಕ್ಷ್ಮ ವಿಚಾರ. ಇಂತಹ ಕೆಲಸಕ್ಕೆ ಕೈಹಾಕಿದರೆ ಅದು ದುಸ್ಸಾಹಸ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಮ್ಮು-ಕಾಶ್ಮೀರದಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಸೈನಿಕರನ್ನ ನಿಯೋಜಿಸಿದ್ದಾರೆ. ಅಲ್ಲಿ ವಿಶೇಷ ಅಧಿಕಾರ ತೆಗೆದಿದ್ದಾರೆ. ಟೆಲಿಪೋನ್ ಸಂಪರ್ಕ ಕಡಿತಗೊಳಿಸಿದ್ದು, ತುರ್ತು ಪರಿಸ್ಥಿತಿ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.

ಸ್ಥಳೀಯ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇಂತಹ ದುಸ್ಸಾಹಸ ಮಾಡುವುದು ಕೇಂದ್ರ ಸರಕಾರಕ್ಕೆ ಒಳ್ಳೆಯದಲ್ಲ. ನಮ್ಮ ರಾಷ್ಟ್ರೀಯ ನಾಯಕರು ಈ ವಿಚಾರದ ಬಗ್ಗೆ ಗಮನಹರಿಸಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು.

ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರಕಾರ ದಬ್ಬಾಳಿಕೆ ಮಾಡುತ್ತಿದ್ದು, ಅಲ್ಲಿ ಇದೀಗ ಇಂಟರ್‌ನೆಟ್ ಇಲ್ಲ. ಪತ್ರಿಕೆಗಳು ಇಲ್ಲ. ಒಂದು ರೀತಿಯಲ್ಲಿ ಭೀತಿಯ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದೊಂದು ರೀತಿಯಲ್ಲಿ ಆಕ್ರಮಣದ ಪ್ರಯತ್ನವಾಗಿದೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಕೇಂದ್ರ ಸರಕಾರ ದೇಶದ ಏಕತೆಗೆ ದಕ್ಕೆ ತರುವ ಕೆಲಸಕ್ಕೆ ಮುಂದಾಗಿದೆ. ಜಮ್ಮು-ಕಾಶ್ಮೀರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಕ್ರಮ ಕೈಗೊಳ್ಳುವುದು ಸಲ್ಲ. ಇದು ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಅವರು ಇದೇ ವೇಳೆ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News