ಸರಕಾರಿ ನೌಕರರಿಗೆ ‘ಆರೋಗ್ಯ ಭಾಗ್ಯ’ ವಿಸ್ತರಣೆ: ಪ್ರಸ್ತಾವನೆ ಸಲ್ಲಿಕೆಗೆ ಮುಖ್ಯಕಾರ್ಯದರ್ಶಿಗೆ ಸಿಎಂ ಸೂಚನೆ

Update: 2019-08-05 15:59 GMT

ಬೆಂಗಳೂರು, ಆ.5: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ‘ಆರೋಗ್ಯ ಭಾಗ್ಯ’ ಯೋಜನೆಯನ್ನು ರಾಜ್ಯ ಸರಕಾರಿ ನೌಕರರಿಗೂ ವಿಸ್ತರಿಸುವಂತೆ ಸರಕಾರಿ ನೌಕರರ ಸಂಘಗಳ ವಿವಿಧ ಜಿಲ್ಲಾಧ್ಯಕ್ಷರು ಮನವಿ ಸಲ್ಲಿಸಿದ್ದು, ಈ ಯೋಜನೆಯನ್ನು ವಿಸ್ತರಿಸಲು ವಿವರವಾದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಈ ಸಂಬಂಧ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ, ಸರಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತರು ಆಸ್ಪತ್ರೆಯ ಚಿಕಿತ್ಸೆಗೆ ಮಾಡಿದ ವೆಚ್ಚವನ್ನು ಮರುಪಾವತಿ ಪಡೆಯಲು ವರ್ಷಗಟ್ಟಲೆ ವಿಳಂಬವಾಗುತ್ತಿದೆಯೆಂದು ಹಾಗೂ ಅನುದಾನದ ಕೊರತೆಯಿಂದ ವೈದ್ಯಕೀಯ ಮರುಪಾವತಿಯನ್ನು ಪಡೆಯದೇ ಕಷ್ಟ ಅನುಭವಿಸುತ್ತಿರುವುದಾಗಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆಂದು ಹೇಳಿದ್ದಾರೆ.

ವೇತನ: ನೌಕರರ ಮತ್ತು ಅವರ ಕುಟುಂಬದ ಅವಲಂಬಿತರ ಚಿಕಿತ್ಸೆಯ ಮರುಪಾವತಿ ವೆಚ್ಚವನ್ನು ನಿಯಮಗಳಲ್ಲಿ ಬದಲಾವಣೆ ತಂದು ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ‘ಆರೋಗ್ಯ ಭಾಗ್ಯ’ ಯೋಜನೆಯನ್ನು ಸರಕಾರಿ ನೌಕರರಿಗೂ ವಿಸ್ತರಿಸಲು ವಿನಂತಿಸಿದ್ದಾರೆ ಎಂದು ಮುಖ್ಯಮಂತ್ರಿ ಪತ್ರದಲ್ಲಿ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಡುವ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ವೇತನ ಮತ್ತು ಭತ್ತೆಗಳನ್ನು ಸಕಾಲಕ್ಕೆ ಪಡೆಯಲು ಸಾಧ್ಯವಾಗದೇ 2-3 ತಿಂಗಳು ವಿಳಂಬವಾಗುತ್ತಿರುವುದರಿಂದ, ಸರಕಾರಿ ನೌಕರರ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆಯೆಂದು ತಿಳಿಸಿದ್ದಾರೆ. ವೇತನ ಮತ್ತು ಭತ್ತೆಗಳನ್ನು ಪ್ರತಿ ತಿಂಗಳು ಮೊದಲ ವಾರದಲ್ಲಿ ನೀಡಲು ವಿನಂತಿಸಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ರಾಜ್ಯ ಸರಕಾರಿ ನೌಕರರಿಗೆ ಸಕಾಲದಲ್ಲಿ ವೇತನ ಹಾಗೂ ಭತ್ತೆಗಳನ್ನು ಕಡ್ಡಾಯವಾಗಿ ತಿಂಗಳ ಮೊದಲ ವಾರದಲ್ಲಿಯೇ ಪಾವತಿಸಿ, ತದನಂತರ ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆಯಾದ ನಂತರ ಮರು ಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ಪಾವತಿಸಲು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯಕಾರ್ಯದರ್ಶಿಗೆ ಯಡಿಯೂರಪ್ಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News