ನೀನು ರಾಜಕೀಯ ವ್ಯಭಿಚಾರಿ: ಎಚ್.ವಿಶ್ವನಾಥ್ ವಿರುದ್ಧ ಸಾ.ರಾ.ಮಹೇಶ್ ವಿವಾದಾತ್ಮಕ ಹೇಳಿಕೆ

Update: 2019-08-05 17:22 GMT

ಮೈಸೂರು,ಆ.5: ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಅವರೊಂದಿಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಸದನದಲ್ಲಿ ವಿಶ್ವನಾಥ್ ಮೇಲೆ ಮಾಡಿರುವ ಆರೋಪಕ್ಕೆ ಈಗಲೂ ಬದ್ಧ, ಅವರು ಚರ್ಚೆಗೆ ಆಹ್ವಾನ ನೀಡಿದ್ದಾರೆ. ಜಾಗ ಸ್ಥಳ ಅವರೇ ನಿಗದಿ ಮಾಡಲಿ. ಅಲ್ಲಿಗೆ ಹೋಗಿ ಚರ್ಚೆ ಮಾಡಲು ಸಿದ್ದ ಎಂದು ಹೇಳಿದರು.

ಎಚ್.ವಿಶ್ವನಾಥ್ ಕಾರ್ಕೋಟಕ ವಿಷ ಎಂದು ಗೊತ್ತಿರಲಿಲ್ಲ, ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದ್ದು ನಾನೇ ಎಂದು ಹೇಳಿದ್ದಾರೆ. ಆಗಲಿ, ಆದರೆ ವಿಶ್ವನಾಥ್ ಮಾತ್ರ ಕಾರ್ಕೋಟಕ ವಿಷ. ಮೂಲೆ ಗುಂಪಾದ ಅವರನ್ನು ಪಕ್ಷಕ್ಕೆ  ಕರೆತಂದೆ. ಇದರಿಂದ ಹಿರಿಯ ರಾಜಕಾರಣಿಗೆ ಉತ್ತಮ ನೆಲೆ ಕಲ್ಪಿಸುವ ಉದ್ದೇಶ ಇತ್ತು. ಆದರೆ ವಿಶ್ವನಾಥ್ ಈ ರೀತಿಯ ಕಾರ್ಕೋಟಕ ವಿಷ ಎಂದು ಗೊತ್ತಿರಲಿಲ್ಲ ಎಂದು ಜರಿದರು.

ನಾನು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಪಕ್ಷಕ್ಕೆ ಮೋಸ ಮಾಡಿ ಹೋಗಿಲ್ಲ ಎಂದು ತಾಯಿ ಚಾಮುಂಡೇಶ್ವರಿ ದೇವಿಯ ಮೇಲೆ ಪ್ರಮಾಣ ಮಾಡುತ್ತೀರ? ನಿಮಗೆ ಆ ಧೈರ್ಯ ಇದ್ದರೆ ಬನ್ನಿ. ಪ್ರಮಾಣ ಮಾಡಿ ಹೇಳಿ ಎಂದು ವಿಶ್ವನಾಥ್ ಅವರಿಗೆ ಆಹ್ವಾನ ನೀಡಿದರು.

ನೀನು ರಾಜಕೀಯ ವ್ಯಭಿಚಾರಿ ಎಂದು ಏಕವಚನದಲ್ಲೇ ವಿಶ್ವನಾಥ್ ವಿರುದ್ಧ ಗುಡುಗಿದ ಸಾ.ರಾ.ಮಹೇಶ್, ಪಕ್ಷ ದ್ರೋಹ ಮಾಡಿ ಬಾಂಬೆಗೆ ಹೋಗಿ ಕುಳಿತಿದ್ದು ಸುಳ್ಳಾ? ಯಾವುದೇ ಹಣ ಪಡೆಯದೆ ಹೋಗಿದ್ಯಾ? ಬಾ, ನೀನು ಎಲ್ಲೇ ಹೇಳಿದರೂ ಅಲ್ಲಿಗೆ ನಾನು ಬರಲು ಸಿದ್ದ. ನಿಮ್ಮದೇ ಜಾಗ, ನಿಮ್ಮದೇ ಆಯ್ಕೆ ಎಂದು ಹೇಳಿದರು.

ಜನರಿಗೆ ನಿನ್ನ ಗೋಮುಖ ವ್ಯಾಘ್ರದ ಮುಖ ಗೊತ್ತಾಗಬೇಕಿದೆ. ಪ್ರಮಾಣ ಮಾಡಿ ಬನ್ನಿ, ಸುಳ್ಳಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸುಳ್ಳು ಆಣೆ ಮಾಡಿದರೆ ದೇವರು ನೋಡಿಕೊಳ್ಳಲಿ ಎಂದು ಆಹ್ವಾನ ನೀಡಿದರು.

ದೇವೇಗೌಡರ ಮನೆಯಲ್ಲಿ ಕುಳಿತು ಏನು ಹೇಳಿದ್ದೀರಿ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರಿಂದ ಸಾಕಷ್ಟು ನೊಂದಿದ್ದೇನೆ. ನನಗೆ ಯಾವುದೇ ಅಧಿಕಾರ ಬೇಡ, ಸಚಿವ ಸ್ಥಾನ ಬೇಡ, ನನ್ನ ಕೊನೆಗಾಲದಲ್ಲಿ ಕೇವಲ ನನಗೆ ಶಾಸಕನನ್ನು ಮಾಡಿ ಸಾಕು ಎಂದಿದ್ದಿರಿ. ಅದೆಲ್ಲವೂ ಮರೆತು ಹೋಯಿತೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News