ಸರಕಾರಿ ನೌಕರರ ಸಂಘಕ್ಕೆ ಆ.7 ರಂದು ಚುನಾವಣೆ

Update: 2019-08-05 16:30 GMT

ಬೆಂಗಳೂರು, ಆ.5: ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಹುದ್ದೆಗಳಿಗೆ ನಾಳೆ(ಆ.7) ಚುನಾವಣೆ ನಡೆಯಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಭರ್ಜರಿ ಪೈಪೋಟಿ ನಡೆದಿದೆ.

ಸರಕಾರಿ ನೌಕರರ ಸಂಘ ಒಂದು ಸಮುದಾಯದವರ ಕೈಯಲ್ಲಿದೆ ಎಂಬ ಅಪವಾದ ಹಲವು ವರ್ಷಗಳಿಂದಲೂ ಕೇಳಿ ಬರುತ್ತಿದೆ. ಹೀಗಾಗಿ, ಈ ಬಾರಿ ಹೊಸಬರಿಗೆ ಅವಕಾಶ ನೀಡಬೇಕು ಎಂಬ ವಾದವೂ ನೌಕರರ ವಲಯದಲ್ಲಿ ಕೇಳಿಬರುತ್ತಿದೆ. ಅಲ್ಲದೆ, ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾಗುವವರು ಅಧಿಕಾರದಲ್ಲಿರುವವರ ಸುತ್ತಲೂ ಸುತ್ತುತ್ತಿರುತ್ತಾರೆ. ವರ್ಗಾವಣೆ ದಂಧೆಯಲ್ಲಿ ನಿರತವಾಗಿರುತ್ತಾರೆ ಎಂಬ ಅಪವಾದವೂ ಇದೆ. ಇದನ್ನು ತೊಡೆದುಹಾಕಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

540 ಮತದಾರರು: ರಾಜ್ಯದಲ್ಲಿ ಅತಿದೊಡ್ಡ ಸರಕಾರಿ ಸಂಸ್ಥೆಗಳಲ್ಲಿರುವವರ ಸಂಘಟನೆಯಾಗಿರುವ ನೌಕರರ ಸಂಘಟನೆಯಲ್ಲಿ 5.25 ಲಕ್ಷ ಸದಸ್ಯತ್ವವಿದ್ದರೂ 540 ಮತದಾರರಷ್ಟೇ ಇದ್ದಾರೆ. ಹೀಗಾಗಿ, ಅಭ್ಯರ್ಥಿಯು ಗೆಲ್ಲಲು 200-250 ಮತಗಳಷ್ಟೇ ಬೇಕಾಗಿವೆ. ಹೀಗಾಗಿ, ಮತದಾರರನ್ನು ಸೆಳೆಯಲು ಕಣದಲ್ಲಿರುವ ಅಭ್ಯರ್ಥಿಗಳು ಶತಪ್ರಯತ್ನ ಮಾಡುತ್ತಿದ್ದಾರೆ. ಕೆಲವರಂತೂ 2-3 ಕೋಟಿ ರೂ.ಗಳಷ್ಟು ಖರ್ಚು ಮಾಡುತ್ತಿದ್ದಾರೆ ಎಂದು ಕೇಳಿಬರುತ್ತಿದೆ.

ತಾಲೂಕು, ಜಿಲ್ಲೆ ಹಾಗೂ ರಾಜ್ಯ ಪರಿಷತ್ ಚುನಾವಣೆ ನಡೆದಿದೆ. ಇದೀಗ ಅಧ್ಯಕ್ಷ ಹಾಗೂ ಖಜಾಂಚಿ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಸಂಘದ ಬೈಲಾದ ಪ್ರಕಾರ ಅಧ್ಯಕ್ಷ ಹಾಗೂ ಖಜಾಂಚಿ ಆಯ್ಕೆಗಷ್ಟೇ ಚುನಾವಣೆ ನಡೆಯಲಿದ್ದು, ಗೌರವಾಧ್ಯಕ್ಷರು, ಉಪಾಧ್ಯಕ್ಷರು ಸೇರಿ ಉಳಿದ ಪದಾಧಿಕಾರಿಗಳನ್ನು ಅಧ್ಯಕ್ಷರು ನೇಮಿಸುತ್ತಾರೆ.

ಸ್ಪರ್ಧೆಯಲ್ಲಿ ಯಾರಿದ್ದಾರೆ: ಅಧ್ಯಕ್ಷ ಸ್ಥಾನದ ಕಣದಲ್ಲಿ ನಿಕಟಪೂರ್ವ ಅಧ್ಯಕ್ಷ ಹಾಗೂ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ರಾಮು, ಬೆಂಗಳೂರು ಉತ್ತರ ವಿಭಾಗದ ಉಪ ತಹಸೀಲ್ದಾರ್ ಕೃಷ್ಣಮೂರ್ತಿ, ಶಿವಮೊಗ್ಗ ಜಿಲ್ಲಾಧ್ಯಕ್ಷ ಸಿ.ಎಸ್.ಷಡಕ್ಷರಿ, ಎಸ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ಕಣದಲ್ಲಿದ್ದಾರೆ. ಖಜಾಂಚಿ ಸ್ಥಾನಕ್ಕೆ ಸೋಮಶೇಖರಯ್ಯ, ಶ್ರೀನಿವಾಸ್, ಸಿದ್ದರಾಮಪ್ಪ, ಗಂಗಾಧರ್ ಹಾಗೂ ಶಿವರುದ್ರಯ್ಯ ಸ್ಪರ್ಧೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News