ಮಾತು ಮತ್ತು ಕೃತಿಯ ನಡುವೆ ಹೊಂದಾಣಿಕೆ ಇರಬೇಕು: ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Update: 2019-08-05 16:46 GMT

ಮಡಿಕೇರಿ, ಅ.5 : ಮಾತು ಮತ್ತು ವಿವೇಕ ಯಾವಾಗಲೂ ಎಚ್ಚರದಿಂದಿರಬೇಕು, ಮಾತಿಗೆ ಮೌಲ್ಯ ತಂದುಕೊಡಬೇಕು. ನುಡಿದಂತೆ ನಡೆಯಬೇಕು. ಮಾತು ಮತ್ತು ಕೃತಿಯ ನಡುವೆ ಹೊಂದಾಣಿಕೆ ಇರದಿದ್ದರೆ ಸಾಲು ಸಾಲು ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಹೊಸದುರ್ಗ ತಾಲೂಕಿನ ತರಳಬಾಳು ಜಗದ್ಗುರು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠ ಹಾಗೂ ಸಹಮತ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಕಾವೇರಿ ಹಾಲ್‍ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಮತ್ತೆ ಕಲ್ಯಾಣ’ ಸಾರ್ವಜನಿಕ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಡೆ ಮತ್ತು ನುಡಿಯಲ್ಲಿ ಒಂದು ವ್ಯತ್ಯಾಸವೂ ಕಾಣಬಾರದು ಎಂದ ಸ್ವಾಮೀಜಿ, 12ನೇ ಶತಮಾನದಲ್ಲಿ ಶರಣರು ಬುದ್ಧಿಯನ್ನು ವಿವೇಕವನ್ನಾಗಿ ಮಾಡಿ ಸಮಾಜ ಕಟ್ಟಿದ್ದಾರೆ. ಎಲ್ಲರನ್ನೂ ತಮ್ಮವರೆಂದು ಅಪ್ಪಿಕೊಳ್ಳಬೇಕು. ಸಮಸ್ಯೆಗಳನ್ನು ವಿವೇಕದಿಂದ ಪರಿಹಾರ ಮಾಡಿಕೊಳ್ಳಬೇಕು. ಇದಕ್ಕಾಗಿ ತಾಳ್ಮೆ ಅತೀ ಮುಖ್ಯ ಎಂದು ನುಡಿದರು.

ಇತ್ತೀಚಿನ ದಿನಗಳಲ್ಲಿ ಬಹಿರ್ಮುಖ ಆಲೋಚನೆಗಳು ಹೆಚ್ಚಾಗಿವೆ. ಆದರೆ ಅಂತರ್ಮುಖಿ ಆಲೋಚನೆಗಳು ಕಡಿಮೆಯಾಗಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದ ಅವರು, ಪ್ರತಿಯೊಬ್ಬರಲ್ಲೂ ಆಸೆ ಇರಬೇಕು. ಆದರೆ ಆಸೆಗೆ ಮಿತಿ ಇರಬೇಕು. ಹಣದಿಂದ ನೆಮ್ಮದಿ, ಶಾಂತಿ ಸಿಗುವುದಿಲ್ಲ. ಇಂದು ಸಂಪತ್ತಿನ ಹಿಂದೆ ಓಡುತ್ತಿದ್ದೇವೆ. ಈ ಬಗ್ಗೆ ಯೋಚಿಸಬೇಕಿದೆ ಎಂದರು.

ಸಂಪತ್ತು ಬೇಕು, ಆದರೆ ಅತಿಯಾಗಿ ಗಳಿಸಬಾರದು. ವೈಜ್ಞಾನಿಕ ವಿಚಾರಗಳನ್ನು ಬಿತ್ತಬೇಕು. ವೈಜ್ಞಾನಿಕ ವಿಚಾರಗಳನ್ನು ಶರಣರು ಹೇಳಿದ್ದರೂ ಸಹ ಲೌಕಿಕ ವಿಷಯದಲ್ಲಿ ಸಿಲುಕಿ ತೊಳಲಾಡುತ್ತಿದ್ದೇವೆ. ಇದು ಸರಿಯಲ್ಲ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. 12 ನೇ ಶತಮಾನದಲ್ಲಿ ಹೊಸ ಸಮಾಜ ಕಟ್ಟಲು ಶರಣರು ಶ್ರಮಿಸಿದರು. ಇಡೀ ವಿಶ್ವಕ್ಕೆ ವಚನ ಧರ್ಮ ಮಾದರಿ ಎಂದ ಅವರು, ವೈಯಕ್ತಿಕ ನೆಲೆಗಟ್ಟನ್ನು ಗಟ್ಟಿಗೊಳಿಸಬೇಕು. ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳಬೇಕು. ಕಾಯಕ ದಾಸೋಹ, ಕಾರ್ಯಕ್ರಮಗಳು ಜರುಗಬೇಕು ಎಂದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಭಾರತೀಯ ವಿದ್ಯಾಭವನ ಮತ್ತು ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ, ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಂತ ಸ್ವಾಮೀಜಿ, ವೀರಶೈವ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ಪ, ಕುಮುದಾ ಧರ್ಮಪ್ಪ, ಕೆ.ಟಿ.ಬೇಬಿ ಮ್ಯಾಥ್ಯೂ, ವಿ.ಪಿ.ಶಶಿಧರ್, ಯಾಕೂಬ್, ಜಿ.ಎನ್.ನಾಗರಾಜ್, ಡಾ.ಕೆ.ಷರೀಪಾ, ಮಹಮ್ಮದ್ ರಫಿ, ರೆ.ಫಾ.ಜೋಸೆಫ್, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ  ಘಟಕದ ಅಧ್ಯಕ್ಷ  ಎಸ್.ಮಹೇಶ್, ರಾಜ್ಯ ಮಾಹಿತಿ ಆಯೋಗದ ಮಾಜಿ ಆಯುಕ್ತ ಕೆ.ವಿರೂಪಾಕ್ಷಯ್ಯ ಇತರರು ಹಾಜರಿದ್ದರು.

ಕೊಣನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರಕಾಶ್ ಕೂಡಿಗೆ ಅವರು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿದರು. ಹಲವು ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಮಾಹಿತಿ ಪಡೆದರು. 

ಸಹಮತ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಸ್ವಾಗತಿಸಿದರೆ, ಮುನೀರ್ ಅಹಮ್ಮದ್ ನಿರೂಪಿಸಿದರು. ಕುಶಾಲನಗರ ಅಕ್ಕನ ಬಳಗದವರು ವಚನ ಗಾಯನ ಮಾಡಿದರೆ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಮಹೇಶ್ ಅವರು ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಬಸವೇಶ್ವರ ದೇವಾಲಯದ ಬಳಿಯಿಂದ ವಿವಿಧ ಕಲಾ ತಂಡಗಳನ್ನೊಳಗೊಂಡ ಸಾಮರಸ್ಯ ನಡಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News