ಸ್ಫೋಟದಿಂದ ಕಣ್ಣು, ಕಿವಿ ಕಳೆದುಕೊಂಡ ಆರೋಪ: ನ್ಯಾಯಕ್ಕಾಗಿ ಕಲ್ಲುಗಣಿ ಕಾರ್ಮಿಕರು, ದಸಂಸ ಪ್ರತಿಭಟನೆ

Update: 2019-08-05 18:26 GMT

ಮಂಡ್ಯ, ಆ.5: ಶ್ರೀರಂಗಪಟ್ಟಣ ತಾಲೂಕು ಮುಂಡುಗದೊರೆ ಕಲ್ಲುಗಣಿ ಸ್ಫೋಟದಲ್ಲಿ ಗಾಯಗೊಂಡ ಗಣಿಕಾರ್ಮಿಕರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.

ಕಳೆದ ಮೇ 24ರ ಸಂಜೆ ನಡೆದ ಕಲ್ಲುಗಣಿ ಸ್ಫೋಟದಲ್ಲಿ ಬೆಳಗಾಂ ಜಿಲ್ಲೆ, ಸವದತ್ತಿ, ರಾಮದುರ್ಗ ತಾಲೂಕಿನ ತಾಂಡದ ರಮೇಶ್ ಧೀರಪ್ಪ ಲಂಬಾಣಿಯ ಎರಡು ಕಣ್ಣು ಹಾಗೂ ರವಿ ಊಮಪ್ಪ ಲಂಬಾಣಿ ಕಿವಿ ಕಳೆದುಕೊಂಡಿದ್ದಾರೆ. ರಾಜು ಸೋಮಪ್ಪ ಲಂಬಾಣಿ ತಲೆಗೆ ಪೆಟ್ಟುಬಿದ್ದು ತೀವ್ರ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಫೋಟದಿಂದ ಗಾಯಗೊಂಡ ಗಣಿಕಾರ್ಮಿಕರನ್ನು ಸಂಬಂದಿ ಕಾರ್ಮಿಕರು ತಕ್ಷಣ ಬೆಂಗಳೂರಿನ ಮಿಂಟೋ ಆಸ್ಪತ್ರೆ, ಮೈಸೂರಿನ ಮಿಷನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಗಣಿ ಮಾಲಕ ಜಿಪಂ ಸದಸ್ಯ ಎಂ.ಸಿ.ಮರಿಯಪ್ಪ ಆಸ್ಪತ್ರೆಗೆ ಸೇರಿಸದೆ ಬೇಜವಾಬ್ಧಾರಿ ಪ್ರದರ್ಶಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಘಟನೆ ನಡೆದ ಮಾರನೆ ದಿನ ಶ್ರೀರಂಗಪಟ್ಟಣ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಂದ ಹೇಳಿಕೆ ಪಡೆದು ಕಾಟಾಚಾರಕ್ಕೆ ಪ್ರಕರಣ ದಾಖಲಿಸಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.

ಗಣಿ ಮಾಲಕ ಎಂ.ಸಿ.ಮರಿಯಪ್ಪ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು. ಅಕ್ರಮ ಗಣಿಗಾರಿಕೆ ಮಾಡಿರುವುದರಿಂದ ದಂಡ ವಿಧಿಸಬೇಕು. ಶಾಶ್ವತ ಅಂಗವೈಕಲ್ಯರಾಗಿರುವ ಕಾರ್ಮಿಕರಿಗೆ ಗರಿಷ್ಠ ಪರಿಹಾರ, ಪುನರ್ವಸತಿ ಕಲ್ಪಿಸಬೇಕು. ಅಕ್ರಮ ಗಣಿಗಾರಿಕೆ ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದರು.

ಕರ್ತವ್ಯ ಲೋಪವೆಸಗಿರುವ ಶ್ರೀರಂಗಪಟ್ಟಣದ ಡಿವೈಎಸ್ಪಿ, ಸಂಬಂಧಿಸಿದ ಕಂದಾಯ ಇಲಾಖೆ, ಅರಣ್ಯ, ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ರಮೇಶ್ ಬೀರಪ್ಪನಿಗೆ ಮಾತ್ರ ಎಸ್ಸಿಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದು, ಉಳಿದ ಇಬ್ಬರು ಕಾರ್ಮಿಕರ ಪ್ರಕರಣವನ್ನೂ ಸದರಿ ಕಾಯ್ದೆಯಡಿ ದಾಖಲು ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸಂಬಂಧಿಸಿ ದೂರು ಸ್ವೀಕರಿಸಿದ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ, ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸಂತ್ರಸ್ತ ಕಲ್ಲುಗಣಿ ಕಾರ್ಮಿಕರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ನ್ಯಾಯ ಸಿಗದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಲಾಯಿತು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಗಂಜಾಂ ರವಿಚಂದ್ರ, ತೂಬಿನಕೆರೆ ಪ್ರಸನ್ನ, ಶೆಟ್ಟಹಳ್ಳಿ ಕುಬೇರ,  ರೈತಸಂಘದ ಮಂಜೇಶ್‍ಗೌಡ, ಗಾಯಗೊಂಡಿರುವ ಗಣಿಕಾರ್ಮಿಕರು ಹಾಗೂ ಕುಟುಂಬದವರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News