ಕೊಡಗಿನಲ್ಲಿ ಧಾರಾಕಾರ ಮಳೆ: ಶಾಲೆ-ಕಾಲೇಜುಗಳಿಗೆ ಬುಧವಾರ ರಜೆ ಘೋಷಣೆ

Update: 2019-08-06 12:27 GMT

ಮಡಿಕೇರಿ, ಆ.6 : ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಅಬ್ಬರ ಜೋರಾಗಿದ್ದು, ಕಳೆದ 24 ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ನದಿ, ತೊರೆಗಳು ತುಂಬಿ ಹರಿಯುತ್ತಿವೆ.

ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕುಗಳಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕಾವೇರಿಯ ಉಗಮ ಕ್ಷೇತ್ರ ತಲಕಾವೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರ ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿ ಇಡೀ ಪ್ರದೇಶ ಜಲಾವೃತಗೊಂಡಿದೆ. ಮಡಿಕೇರಿ, ಭಾಗಮಂಡಲ, ನಾಪೋಕ್ಲು ರಸ್ತೆಗಳಲ್ಲಿ ಪ್ರವಾಹದ ಪರಿಸ್ಥಿತಿ ಇದ್ದು ಗ್ರಾಮಸ್ಥರ ಸಂಚಾರಕ್ಕೆ ಜಿಲ್ಲಾಡಳಿತ ದೋಣಿ ವ್ಯವಸ್ಥೆಯನ್ನು ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಯನ್ನು ಕೂಡ ನಿಯೋಜಿಸಲಾಗಿದೆ.  

ತ್ರಿವೇಣಿ ಸಂಗಮದ ನೀರು ಶ್ರೀಭಗಂಡೇಶ್ವರ ದೇವಾಲಯ ಮೆಟ್ಟಿಲನ್ನು ಆವರಿಸಿದ್ದು, ಭಕ್ತರ ಆಗಮನಕ್ಕೆ ಅಡಚಣೆಯಾಗಿದೆ. ಭಾಗಮಂಡಲದಲ್ಲಿ ಪ್ರವಾಹದ ಸ್ಥಿತಿ ಇರುವುದರಿಂದ ಸ್ಥಳಕ್ಕೆ ಭೇಟಿ ನೀಡಿದ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್ ಹಾಗೂ ಅಧಿಕಾರಿ ವರ್ಗ ದೋಣಿಯ ಮೂಲಕ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು. ಗ್ರಾಮಸ್ಥರು ಹಾಗೂ ಭಕ್ತರ ಸಂಚಾರಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಜಿಲ್ಲೆಯ ಪ್ರತಿ ನೋಡಲ್ ಅಧಿಕಾರಿಗಳಿಂದ ಅವರು ಮಾಹಿತಿ ಪಡೆಯುತ್ತಿದ್ದಾರೆ. 

ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಕಳೆದ 24 ಗಂಟೆಗಳಲ್ಲಿ 7 ಇಂಚಿಗೂ ಅಧಿಕ ಮಳೆಯಾಗಿದೆ. ಮೂರ್ನಾಡು ಸಮೀಪ ಬಲಮುರಿಯ ಹಳೆಯ ಸೇತುವೆ ಮುಳುಗಡೆಗೊಂಡಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ, ಮಾಕುಟ್ಟ, ಶ್ರೀಮಂಗಲ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಪೊನ್ನಂಪೇಟೆಯಲ್ಲಿ ದಾಖಲೆಯ ಎಂಟು ಇಂಚು ಮಳೆಯಾಗಿದೆ. ಇಲ್ಲಿಗೆ ಸಮೀಪದ ಕುಂದ ಸೇತುವೆ ಮುಳುಗಡೆಯಾಗಿದೆ. ಎರಡು ದಿನಗಳ ಹಿಂದೆ ಕುಸಿತ ಕಂಡ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮಾಕುಟ್ಟ ರಸ್ತೆಯ ದುರಸ್ತಿ ಕಾರ್ಯ ಭರದಿಂದ ಸಾಗಿದೆ.

ಸೋಮವಾರಪೇಟೆ ತಾಲೂಕಿನ ವಿವಿಧ ಗ್ರಾಮಗಳು ಮಹಾಮಳೆಯ ಪರಿಣಾಮವನ್ನು ಎದುರಿಸುತ್ತಿವೆ. ಸೋಮವಾರಪೇಟೆ, ಸಕಲೇಶಪುರ ಹೆದ್ದಾರಿಯಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ವಾಹನ ಸಂಚಾರ ಅಸ್ತವ್ಯವಸ್ತಗೊಂಡಿದೆ.

ಮಡಿಕೇರಿ ನಗರದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಬೆಟ್ಟಗುಡ್ಡಗಳ ಮೇಲೆ ಮನೆ ನಿರ್ಮಿಸಿಕೊಂಡಿರುವವರು ಜೀವ ಕೈಯಲ್ಲಿಡಿದುಕೊಂಡು ದಿನ ದೂಡುತ್ತಿದ್ದಾರೆ. ಕಳೆದ ವರ್ಷ ಮಳೆಹಾನಿಗೀಡಾಗಿದ್ದ ಇಂದಿರಾನಗರ ಬಡಾವಣೆಯಲ್ಲಿ ಸೋಮವಾರ ರಾತ್ರಿ ಬೃಹತ್ ಪ್ರಮಾಣದ ಬರೆ ಕುಸಿದಿದ್ದು, ಕುಮಾರ್ ಎಂಬುವವರ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

ರೆಡ್ ಅಲರ್ಟ್
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಆ.7 ರಿಂದ 9 ರವರೆಗೆ ಮಳೆಯ ಪ್ರಮಾಣ ಹೆಚ್ಚಾಗುವ ಕಾರಣ ಜಿಲ್ಲೆಯಲ್ಲಿ “ರೆಡ್ ಅಲರ್ಟ್” ಘೋಷಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳ ತಂಡ ಸಜ್ಜಾಗಿದೆ.

ರಜೆ ಘೋಷಣೆ

ಮಳೆ ತೀವ್ರತೆಯನ್ನು ಪಡೆದುಕೊಂಡ ಹಿನ್ನೆಲೆ ಜಿಲ್ಲೆಯ ಶಾಲಾ, ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ಮಂಗಳವಾರ ರಜೆ ಘೋಷಿಸಿದ್ದ ಜಿಲ್ಲಾಡಳಿತ ಆ.7 ರಂದು ಕೂಡ ರಜೆ ನೀಡಿ ಆದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News