ಶಿವಮೊಗ್ಗದಲ್ಲಿ ಮಳೆ ಆರ್ಭಟ: ಹಲವೆಡೆ ಪ್ರವಾಹ ಭೀತಿ, ಜನಜೀವನ ಅಸ್ತವ್ಯಸ್ತ

Update: 2019-08-06 12:53 GMT

ಶಿವಮೊಗ್ಗ, ಆ. 6: ಮಲೆನಾಡಲ್ಲಿ ಮುಂಗಾರು ಮಳೆ ಅಬ್ಬರಿಸಿ ಬೊಬ್ಬಿರಿಯಲಾರಂಭಿಸಿದೆ. ಮಂಗಳವಾರ ವರ್ಷಧಾರೆಯ ಆರ್ಭಟ ಮತ್ತಷ್ಟು ತೀವ್ರಗೊಂಡಿದ್ದು, 'ಮಲೆನಾಡು' ಅಕ್ಷರಶಃ 'ಮಳೆನಾಡಾ'ಗಿ ಪರಿವರ್ತಿತವಾಗಿದೆ. ಜಿಲ್ಲೆಯಲ್ಲಿ ನೂರಾರು ಎಕರೆ ಕೃಷಿ ಜಮೀನು, ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿವೆ. ಹಲವೆಡೆ ಮನೆಗಳು ಕುಸಿದು ಬಿದ್ದಿವೆ. ಮರಗಳು ಧರಾಶಾಹಿಯಾಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ದಾಖಲೆಯ, ಭಾರೀ ವರ್ಷಧಾರೆಯಾಗುತ್ತಿದೆ. ಇದರಿಂದ ಪ್ರಮುಖ ನದಿಗಳ ನೀರಿನ ಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಶರಾವತಿ, ತುಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಲವೆಡೆ ಪ್ರವಾಹ ಸೃಷ್ಟಿಸಿವೆ. ಈ ನಡುವೆ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಭಾರೀ ಹೆಚ್ಚಳ ಕಂಡುಬಂದಿದ್ದು, ಸಣ್ಣಪುಟ್ಟ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. 

ಕಟ್ಟೆಚ್ಚರ: ಭಾರೀ ಮಳೆಯ ಹಿನ್ನೆಲೆಯಲ್ಲಿ, ಮಂಗಳವಾರ ಜಿಲ್ಲೆಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿತ್ತು. ಹಲವೆಡೆ ಪ್ರವಾಹ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ, ಕಂಟ್ರೋಲ್ ರೂಂಗಳನ್ನು ತೆರೆದಿದೆ. ವ್ಯಾಪಕ ಕಟ್ಟೆಚ್ಚರದಿಂದಿರುವಂತೆ ತಹಶೀಲ್ದಾರ್ ಗಳಿಗೆ ಸೂಚಿಸಿದೆ. ಜೊತೆಗೆ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಜಿಲ್ಲಾಡಳಿತ ತಿಳಿಸಿದೆ.

ಅಸ್ತವ್ಯಸ್ತ: ಶಿವಮೊಗ್ಗ ನಗರದಲ್ಲಿ ಮುಸಲಧಾರೆಯ ಅಬ್ಬರ ಜೋರಾಗಿದೆ. ಮಂಗಳವಾರ ಮುಂಜಾನೆಯಿಂದ ನಿರಂತರವಾಗಿ ಹಲವು ಗಂಟೆಗಳ ಕಾಲ ಮಳೆಯಾಯಿತು. ಇದರಿಂದ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿತು. ಇನ್ನೊಂದೆಡೆ ನಗರದ ಹಲವೆಡೆ ರಾಜಕಾಲುವೆ, ಚರಂಡಿಗಳು ಉಕ್ಕಿ ಹರಿದು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಮನೆಗಳ ಗೋಡೆ ಕುಸಿದಿವೆ. ಮರಗಳು ಉರುಳಿವೆ. 

ಟ್ಯಾಂಕ್‍ ಮೊಹಲ್ಲಾ, ಬಾಪೂಜಿನಗರ, ಆರ್.ಎಂ.ಎಲ್. ನಗರ, ವಿದ್ಯಾನಗರದ ಹೇಮಶ್ರೀ ಲೇಔಟ್, ಅಣ್ಣಾನಗರ, ಗಾಂಧಿನಗರ, ಮೆಹಬೂಬ್ ನಗರ, ಟಿಪ್ಪುನಗರ, ದುರ್ಗಿಗುಡಿ, ಶರಾವತಿ ನಗರ ರಸ್ತೆ, ವಡ್ಡಿನಕೊಪ್ಪ, ವಿನೋಬನಗರ ಪೊಲೀಸ್ ಚೌಕಿ ವೃತ್ತ ಮತ್ತಿತರೆಡೆ ರಸ್ತೆಗಳು ಜಲಾವೃತವಾಗಿವೆ. 
ಕೆಲವೆಡೆ ಮನೆ, ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದೆ. ವಿನೋಬನಗರದ 60 ಅಡಿ ರಸ್ತೆ, ಬೈಪಾಸ್ ರಸ್ತೆಯಲ್ಲಿ ಮರಗಳು ಉರುಳಿ ಬಿದ್ದಿದೆ. ಅಣ್ಣಾ ನಗರ ಬಡಾವಣೆಯಲ್ಲಿ ತುಂಗಾ ನಾಲೆ ಉಕ್ಕಿ ಹರಿದ ಪರಿಣಾಮ ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿದೆ. ಹಾಗೆಯೇ ವಡ್ಡಿನಕೊಪ್ಪದಲ್ಲಿಯೂ ತುಂಗಾ ನಾಲೆ ನೀರು ತುಂಬಿ ಹರಿದು ಗದ್ದೆ, ಮನೆಗಳಿಗೆ ನೀರು ನುಗ್ಗಿದೆ. 

ಅಂಗಳಯ್ಯನ ಕೇರಿ ಹಾಗೂ ಹೊಸಮನೆ ಬಡಾವಣೆಯ ಅಂಬೇಡ್ಕರ್ ಭವನದ ಹತ್ತಿರ ಒಟ್ಟಾರೆ ಎರಡು ಮನೆಗಳ ಗೋಡೆ ಕುಸಿದು ಬಿದ್ದಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಗಾಜನೂರಿನ ತುಂಗಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಮೈದುಂಬಿ ಹರಿಯುತ್ತಿದೆ. ನದಿಯ ಅಪಾಯದ ಮಟ್ಟ ಸೂಚಿಸುವ ಕೋರ್ಪಳಯ್ಯನ ಛತ್ರದ ಬಳಿಯಿರುವ ಮಂಟಪದ ಮೇಲೆ ಎರಡ್ಮೂರು ಅಡಿಯಷ್ಟು ನೀರು ಹರಿಯುತ್ತಿದೆ. 

ಸೇತುವೆ ಉರುಳಿಸಲು ಮುಂದಾದ ನಿವಾಸಿಗಳು!
ಶಿವಮೊಗ್ಗ ನಗರದ ಬಾಪೂಜಿನಗರ ಮುಖ್ಯ ರಸ್ತೆಯಲ್ಲಿರುವ ಹಳೇಯ ಕಾಲದ ಸೇತುವೆಯನ್ನು ಸ್ಥಳೀಯ ನಿವಾಸಿಗಳೇ ಉರುಳಿಸಲು ಮುಂದಾದ ಘಟನೆ ಮಂಗಳವಾರ ನಡೆಯಿತು. ಆಕ್ರೋಶಭರಿತ ನಾಗರಿಕರ ಒತ್ತಡಕ್ಕೆ ಮಣಿದ ಮಹಾನಗರ ಪಾಲಿಕೆ ಆಡಳಿತವು ಜೆಸಿಬಿ ಮೂಲಕ ಸೇತುವೆ ತೆರವುಗೊಳಿಸಿತು. 

ಈ ಸೇತುವೆ ಕಿರಿದಾಗಿದ್ದ ಕಾರಣದಿಂದ ಹಾಗೂ ಪಿಲ್ಲರ್ ಗಳಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿರಲಿಲ್ಲ. ಕಸಕಡ್ಡಿ ತುಂಬಿಕೊಳ್ಳುತ್ತಿತ್ತು. ಧಾರಾಕಾರ ಮಳೆಯಾದ ವೇಳೆ ರಾಜಕಾಲುವೆ ನೀರು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗುತ್ತಿತ್ತು. ಈ ಸಂಬಂಧ ಸ್ಥಳೀಯ ನಿವಾಸಿಗಳು ಹಳೇಯ ಸೇತುವೆ ತೆರವುಗೊಳಿಸಿ, ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿಕೊಂಡು ಬಂದಿದ್ದರು. ಆದರೆ ಸೇತುವೆ ನಿರ್ಮಾಣವಾಗಿರಲಿಲ್ಲ. 

ಮಂಗಳವಾರ ಭಾರೀ ಮಳೆಗೆ ರಾಜಕಾಲುವೆ ಉಕ್ಕಿ ಹರಿದು ಬಾಪೂಜಿನಗರ ಹಾಗೂ ಟ್ಯಾಂಕ್ ಮೊಹಲ್ಲಾ ಬಡಾವಣೆಗಳು ಜಲಾವೃತವಾಗಿದ್ದವು. ಇದರಿಂದ ಆಕ್ರೋಶಗೊಂಡ ನಿವಾಸಿಗಳು ಸುರಿವ ಮಳೆಯಲ್ಲಿಯೇ ಹಳೇಯ ಸೇತುವೆ ನೆಲಸಮಕ್ಕೆ ಮುಂದಾದರು. ನಂತರ ಪಾಲಿಕೆ ಆಡಳಿತವು ನಾಗರಿಕರ ಒತ್ತಡಕ್ಕೆ ಮಣಿದು ಜೆಸಿಬಿ ಮೂಲಕ ಸೇತುವೆಯನ್ನು ತೆರವುಗೊಳಿಸಿ, ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯಲು ಕ್ರಮಕೈಗೊಂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News