14 ತಿಂಗಳು ಕಾಂಗ್ರೆಸ್ ಜೀತದಾಳುವಿನಂತೆ ದುಡಿದೆ: ಎಚ್.ಡಿ.ಕುಮಾರಸ್ವಾಮಿ

Update: 2019-08-06 12:59 GMT

ಬೆಂಗಳೂರು, ಆ.6: ರಾಜ್ಯದ ಮುಖ್ಯಮಂತ್ರಿಯಾಗಿ 14 ತಿಂಗಳು ನಾನು ಕಾಂಗ್ರೆಸ್ ಜೀತದಾಳುವಿನಂತೆ ದುಡಿದೆ. ಆದರೂ, ಸರಕಾರ ಪತನಕ್ಕೆ ಎಲ್ಲರೂ ನನ್ನತ್ತಲೇ ಬೊಟ್ಟು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ನಿಗಮ ಮತ್ತು ಮಂಡಳಿಗಳಿಗೆ ನೇಮಕವಾಗಿದ್ದ ಕಾಂಗ್ರೆಸ್ ಶಾಸಕರು ಸೇರಿ ಎಲ್ಲರಿಗೂ ಸಂಪೂರ್ಣ ಸ್ವಾತಂತ್ರ ನೀಡಿದ್ದೆ. ಅಷ್ಟಾಗಿಯೂ ಸ್ಥಳೀಯ ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಅಸಹನೀಯವಾಗಿ ವರ್ತಿಸಿದರು ಎಂದು ವಿಷಾದಿಸಿದರು. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಗೊಳ್ಳುವುದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಇಷ್ಟವಿರಲಿಲ್ಲ. ಇವರೆಲ್ಲರ ವಿರೋಧದ ಹೊರತಾಗಿಯೂ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್‌ನೊಂದಿಗೆ ಮೈತ್ರಿ ಸರಕಾರ ರಚಿಸಲು ಆಸಕ್ತಿ ತೋರಿ, ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ನೀಡಿದ್ದರು. ದೋಸ್ತಿ ಸರಕಾರ ರಚನೆಯ ಬಗ್ಗೆ ಇಷ್ಟವಿಲ್ಲದಿದ್ದ ಕಾಂಗ್ರೆಸ್ ನಾಯಕರು ಸರಕಾರ ರಚನೆಗೊಂಡ ಮೊದಲ ದಿನದಿಂದಲೂ ಹೇಗೆಲ್ಲ ನಡೆದುಕೊಂಡರು ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಅವರು ಹೇಳಿದರು.

ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್ ಶಾಸಕರು ಸಮಯ ನಿಗದಿಪಡಿಸಿಕೊಳ್ಳದೇ ನನ್ನ ಬಳಿ ಬರುತ್ತಿದ್ದರು. ಆದರೂ ಬೇಸರಿಸಿಕೊಳ್ಳದೆ, ಅವರವರ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯವಾದ ಯೋಜನೆಗಳಿಗೆ ಅನುಮೋದನೆ ನೀಡುವ ಜತೆಗೆ ಅನುದಾನಗಳನ್ನು ತಕ್ಷಣವೇ ಬಿಡುಗಡೆ ಮಾಡಲು ನಿರ್ಧರಿಸುತ್ತಿದ್ದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 14 ತಿಂಗಳಲ್ಲಿ 19 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಹೋಲಿಸಿದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ನೊಂದಿಗೆ ಸರಕಾರ ರಚಿಸಲು ಕೆಲ ಜೆಡಿಎಸ್ ಶಾಸಕರ ವಿರೋಧವೂ ಇತ್ತು. ಮುಂದೊಂದು ದಿನ ಕಾಂಗ್ರೆಸ್ ನಾಯಕರು ಜೆಡಿಎಸ್ ಬೆನ್ನಿಗೆ ಚೂರಿ ಇರಿಯುತ್ತಾರೆ ಎಂದು ಎಚ್ಚರಿಸಿದ್ದರು. ಇವರ ವಿರೋಧವನ್ನು ಲೆಕ್ಕಿಸದೆ ನಾನು ಕಾಂಗ್ರೆಸ್‌ನೊಂದಿಗೆ ಸರಕಾರ ರಚಿಸಿದೆ. ಈಗ ಅದಕ್ಕಾಗಿ ಪರಿತಪಿಸುತ್ತಿರುವೆ ಎಂದು ಕುಮಾರಸ್ವಾಮಿ ಹೇಳಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಬಹುದೊಡ್ಡ ಭಾರವೊಂದು ಇಳಿದಂತಾಗಿದೆ. ಈಗ ತುಂಬಾ ಆರಾಮವಾಗಿದ್ದೇನೆ. 14 ತಿಂಗಳು ನಾನು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದೆ. ಈ ಅವಧಿಯಲ್ಲಿ ನಾನು ಮಾಡಿದ ಒಳ್ಳೆಯ ಕೆಲಸಗಳನ್ನು ಯಾರೊಬ್ಬರೂ ಗುರುತಿಸಲಿಲ್ಲ ಎಂಬ ನೋವು ನನಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಭವಿಷ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂಬುದು ಅನೇಕ ಜೆಡಿಎಸ್ ಶಾಸಕರ ಅಭಿಪ್ರಾಯವಾಗಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಈಗಲೂ ನಮಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಮುಂದೆ ಏನಾಗುತ್ತದೋ ನೋಡೋಣ ಎಂದು ಅವರು ಸೂಚ್ಯವಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News