ಡೆಂಗ್ ಗೆ 2ನೇ ತರಗತಿ ವಿದ್ಯಾರ್ಥಿನಿ ಬಲಿ

Update: 2019-08-06 14:27 GMT

ಮಂಡ್ಯ, ಆ.6: ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದ ಕೆ.ಆರ್.ಪೇಟೆ ತಾಲೂಕಿನ ಅಗಸರಹಳ್ಳಿ ಗ್ರಾಮದ ಬಾಲಕಿ ಡೆಂಗ್ ಜ್ವರಕ್ಕೆ ಬಲಿಯಾಗಿದ್ದಾಳೆ.

ರವಿಕುಮಾರ್ ಮತ್ತು ರಾಣಿ ದಂಪತಿ ಪುತ್ರಿ ಎ.ಆರ್.ಹೇಮಾವತಿ(8) ಮೃತ ಬಾಲಕಿ. ಶನಿವಾರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರಿನ ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.

ಹೇಮಾವತಿ ಸಹೋದರಿ ಪ್ರೇರಣ(5) ಕೂಡ ಡೆಂಗ್ ಜ್ವರದಿಂದ ಬಳಲುತ್ತಿದ್ದು, ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿ ಹೇಮಾವತಿ ಮೃತಪಟ್ಟ ವಿಷಯ ತಿಳಿಯುತಿದ್ದಂತೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ,  ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ್, ಶತಮಾನದ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಕತ್ತರಘಟ್ಟ ವಾಸು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ಶಾಲೆಗಳಲ್ಲಿ ಅಡುಗೆ ಮನೆ, ಬಿಸಿಯೂಟ ಕೇಂದ್ರಗಳ ಸ್ವಚ್ಛತೆ ಹಾಗೂ ಡೆಂಗ್ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಆರೋಗ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಇದರಿಂದಾಗಿ ತಾಲೂಕಿನಲ್ಲಿ ಡೆಂಗ್ ಪ್ರಕರಣ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ತಾಲೂಕು ಆರೋಗ್ಯಾಧಿಕಾರಿ ಡಾ.ಹರೀಶ್ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು. ಕ್ರೀಯಾಶೀಲವಾಗಿ ಕೆಲಸ ಮಾಡುವ ಉತ್ತಮ ಆರೋಗ್ಯಾಧಿಕಾರಿಗಳನ್ನು ತಾಲೂಕಿಗೆ ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News