ಉ.ಕ. ಭಾಗದಲ್ಲಿ ನೆರೆ ಹಾವಳಿ: ಎರಡು ಅಧ್ಯಯನ ತಂಡ ರಚನೆ- ದಿನೇಶ್‌ ಗುಂಡೂರಾವ್

Update: 2019-08-06 15:47 GMT

ಬೆಂಗಳೂರು, ಆ.6: ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ನೆರೆ ಹಾವಳಿಯ ವಾಸ್ತವ ಪರಿಸ್ಥಿತಿ ಅರಿಯಲು ಕೆಪಿಸಿಸಿ ವತಿಯಿಂದ ಮಾಜಿ ಸಚಿವ ಎಚ್.ಕೆ.ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಎರಡು ಅಧ್ಯಯನ ತಂಡ ರಚನೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ವಿಭಾಗದಲ್ಲಿ ಎಚ್.ಕೆ.ಪಾಟೀಲ್ ಹಾಗೂ ಗುಲ್ಬರ್ಗ ವಿಭಾಗದಲ್ಲಿ ಈಶ್ವರ್ ಖಂಡ್ರೆ ನೇತೃತ್ವದ ತಂಡಗಳು ಭೇಟಿ ಮಾಡಿ ಮಳೆಯಿಂದ ಆಗಿರುವ ಅನಾಹುತಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲಿವೆ ಎಂದರು.

ನೆರೆ ಹಾವಳಿ ಭಾದಿತ ಪ್ರದೇಶಗಳಲ್ಲಿ ರಾಜ್ಯ ಸರಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ, ಜನರ ಸಮಸ್ಯೆಗಳಿಗೆ ಯಾವ ರೀತಿಯಲ್ಲಿ ಸ್ಪಂದಿಸಿದೆ ಅನ್ನುವ ಬಗ್ಗೆ ಈ ತಂಡಗಳು ಅಧ್ಯಯನ ಮಾಡಿ ವರದಿ ನೀಡಲಿವೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ರಾಜ್ಯದಲ್ಲಿ ಇನ್ನೂ ಮಂತ್ರಿಮಂಡಲವೇ ರಚನೆಯಾಗಿಲ್ಲ. ಮುಖ್ಯಮಂತ್ರಿಗಳು ಒಬ್ಬರೇ ಇದ್ದು, ಆಡಳಿತದ ಚುಕ್ಕಾಣಿ ಹಿಡಿಯುವ ರಾಜಕೀಯ ನಾಯಕತ್ವವೇ ಇಲ್ಲದಂತಾಗಿದೆ. ಅಧಿಕಾರಿಗಳನ್ನಷ್ಟೇ ನಂಬಿಕೊಂಡು ಕುಳಿತರೆ ಆಗುವುದಿಲ್ಲ. ಕೂಡಲೇ ಸಚಿವ ಸಂಪುಟ ರಚಿಸಿ, ಪ್ರವಾಹ ಸ್ಥಳಗಳಲ್ಲಿ ಪರಿಹಾರ ಕಾರ್ಯಗಳನ್ನು ಮತ್ತಷ್ಟು ತೀವ್ರಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ವಿರೋಧ ಪಕ್ಷದಲ್ಲಿ ಕುಳಿತು ಕೇವಲ ರಾಜಕಾರಣ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ಸರಕಾರಕ್ಕೆ ಜನರಿಗೆ ತೊಂದರೆ ಆಗಿರುವ ಬಗ್ಗೆ ನಾವು ಕೂಡ ಮಾಹಿತಿ ನೀಡುತ್ತೇವೆ. ಸರಕಾರದ ವಿರುದ್ಧ ಪ್ರತಿಭಟನೆ ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡಬಾರದು. ಆದರೆ, ಸರಕಾರ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವಿದೆ. ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಾರೆ ಅನ್ನುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಉತ್ತರ ಕರ್ನಾಟಕದಲ್ಲಿ ಮಳೆಗೆ ಭಾರಿ ಹಾನಿಯಾಗಿದೆ. ಕೇಂದ್ರ ಸರಕಾರ ಇಂತಹ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ಹಣಕಾಸಿನ ನೆರವು ಕೊಡಬೇಕು. ಮಲತಾಯಿ ಧೋರಣೆ ಅನುಸರಿಸಬಾರದು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಇರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಹೆಚ್ಚು ಅನುದಾನ ತರಬೇಕು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.

ರಮೇಶ್ ಜಾರಕಿಹೊಳಿಗೆ ಪಾಠ: ಗೋಕಾಕ್ ಕ್ಷೇತ್ರದ ಕಾರ್ಯಕರ್ತರು ಇಂದು ಭೇಟಿ ಮಾಡಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಟ್ಟಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಪಾಠ ಕಲಿಸಲಿಕ್ಕೆ ತಯಾರಾಗಿರುವುದಾಗಿ ಹೇಳಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಕಾರ್ಯಕರ್ತರ ಮಾತುಗಳಲ್ಲಿ ಆಕ್ರೋಶ ಕಂಡು ಬರುತ್ತಿದೆ. ನಮಗೂ ಕಾರ್ಯಕರ್ತರ ಉತ್ಸಾಹ ನೋಡಿ ಆಶ್ಚರ್ಯವಾಗಿದೆ. ಮುಂದಿನ ದಿನಗಳಲ್ಲಿ ಮತದಾರರೇ ರಮೇಶ್ ಜಾರಕಿಹೊಳಿಗೆ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು. 

ಎಚ್.ಕೆ.ಪಾಟೀಲ್ ನೇತೃತ್ವದ ಸಮಿತಿಯಲ್ಲಿ ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ್, ಉಮಾಶ್ರೀ, ಶಿವಾನಂದ ಪಾಟೀಲ್ ಹಾಗೂ ಐ.ಜಿ.ಸನದಿ ಮತ್ತು ಈಶ್ವರ್ ಖಂಡ್ರೆ ನೇತೃತ್ವದ ಸಮಿತಿಯಲ್ಲಿ ಬೋಸರಾಜು, ರಾಜಶೇಖರ ಪಾಟೀಲ್, ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ್, ನಾಸೀರ್ ಹುಸೇನ್ ಹಾಗೂ ಅಜಯ್‌ ಸಿಂಗ್‌ ರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News