ಧಾರವಾಡದಲ್ಲಿ ಧಾರಾಕಾರ ಮಳೆ: ಅಧಿಕಾರಿಗಳ ರಜೆ ರದ್ದು, ಕೇಂದ್ರಸ್ಥಾನದಲ್ಲಿರಲು ಜಿಲ್ಲಾಧಿಕಾರಿ ಆದೇಶ

Update: 2019-08-06 15:53 GMT
ಜಿಲ್ಲಾಧಿಕಾರಿ ದೀಪಾ ಚೋಳನ್

ಧಾರವಾಡ, ಆ.6: ಧಾರವಾಡ ಜಿಲ್ಲೆಯಲ್ಲಿ ಬಹುವರ್ಷಗಳ ನಂತರ ವಾಡಿಕೆಗಿಂತ ಹೆಚ್ಚು ಮಳೆ ಆಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆದಲ್ಲಿ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕಚೇರಿ ಹಾಗೂ ಎಲ್ಲ ತಹಶೀಲ್ದಾರ್‌ಗಳ ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಎಲ್ಲ ಹಂತದ ಅಧಿಕಾರಿಗಳು ಸಂತ್ರಸ್ತರಿಗೆ ತಕ್ಷಣ ಸ್ಪಂದಿಸಲು, ಪರಿಹಾರ ಕ್ರಮ ಕೈಗೊಳ್ಳಲು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಇರಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ಎಲ್ಲ ತಹಶೀಲ್ದಾರ್‌ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಳೆಯಿಂದ ಆಗುತ್ತಿರುವ ಹಾನಿ ಹಾಗೂ ಮುಂಜಾಗ್ರತೆ ಕುರಿತು ತುರ್ತು ಸಭೆ ಜರುಗಿಸಿ ನಿರ್ದೇಶನ ನೀಡಿದರು.

ಎಲ್ಲ ಇಲಾಖೆಗಳ ಮುಖ್ಯಸ್ಥರು, ತಾಲೂಕುಮಟ್ಟದ ಅಧಿಕಾರಿಗಳು ಮತ್ತು ಗ್ರಾಮಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿದ್ದು, ಪ್ರತಿ ಮೂರು ಗಂಟೆಗೊಮ್ಮೆ ಆಯಾ ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ಸಲ್ಲಿಸಬೇಕು ಎಂದು ಅವರು ಸೂಚನೆ ನೀಡಿದರು. ಮುಂದಿನ 78 ಗಂಟೆವರೆಗೆ ಎಲ್ಲರೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ಸಾಧ್ಯತೆಯೊಂದಿಗೆ ಸಿದ್ಧರಿರಬೇಕು. ವಾಟ್ಸ್ ಆ್ಯಪ್, ಟೋಲ್ ಫ್ರೀ ದೂರವಾಣಿ ಮೂಲಕ ತಕ್ಷಣ ಮಾಹಿತಿ ಹಂಚಿಕೊಳ್ಳಬೇಕು. ಜಿಲ್ಲೆಯ ಯಾವುದೇ ಪ್ರದೇಶದಿಂದ ಸಮಸ್ಯೆ ಕೇಳಿ ಬಂದರೂ ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ನೀಡಿದರು.

ಪ್ರತಿ ತಾಲೂಕಿನಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸ್, ಅಗ್ನಿಶಾಮಕ, ಆರೋಗ್ಯ, ಕಂದಾಯ ಮತ್ತು ವಿದ್ಯುತ್ ಸರಬರಾಜು ಇಲಾಖೆಗಳ ಅಧಿಕಾರಿಗಳ ತಂಡ ರಚಿಸಬೇಕು. ಅಪಾಯದ ಸ್ಥಳದಲ್ಲಿರುವ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.

ಸಹಾಯವಾಣಿ: ಹೆಚ್ಚು ಮಳೆಯಿಂದ ತೊಂದರೆಗೀಡಾದವರು ಮತ್ತು ಮಳೆಹಾನಿಗಳ ಕುರಿತು ಸಾರ್ವಜನಿಕರು ಮಾಹಿತಿ ನೀಡಲು ಅನುಕೂಲವಾಗುವಂತೆ ಜಿಲ್ಲಾಡಳಿತವು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಎಲ್ಲ ತಾಲೂಕಿನ ತಹಶೀಲ್ದಾರ್ ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಿದೆ. ಜಿಲ್ಲಾಧಿಕಾರಿಗಳ ಕಚೇರಿ ವಾಟ್ಸ್ ಆ್ಯಪ್ ಸಂಖ್ಯೆ 9480230962, ಸಹಾಯವಾಣಿ ಸಂಖ್ಯೆ: 1077 ಆರಂಭಿಸಲಾಗಿದೆ.

ನವಲಗುಂದ ತಹಶೀಲ್ದಾರ್ ಕಾರ್ಯಾಲಯ-08380-229240, ಕಲಘಟಗಿ ತಹಶೀಲ್ದಾರ್ ಕಾರ್ಯಾಲಯ-08370-284535, ಕುಂದಗೋಳ ತಹಶೀಲ್ದಾರ್ ಕಾರ್ಯಾಲಯ-08304-280239, ಅಣ್ಣಿಗೇರಿ ತಹಶೀಲ್ದಾರ್ ಕಾರ್ಯಾಲಯ- 08380-229240, ಅಳ್ನಾವರ ತಹಶೀಲ್ದಾರ್ ಕಾರ್ಯಾಲಯ-0836-2385544, ಧಾರವಾಡ ತಹಶೀಲ್ದಾರ್ ಕಾರ್ಯಾಲಯ -0836-2233822, ಹುಬ್ಬಳ್ಳಿ ತಹಶೀಲ್ದಾರ್ ಕಾರ್ಯಾಲಯ-0836-2358035 ಇವುಗಳಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇಬ್ರಾಹೀಮ್ ಮೈಗೂರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಆಕೃತಿ ಬನ್ಸಾಲ್, ಮಹಾನಗರ ಪಾಲಿಕೆಯ ಆಯುಕ್ತ ಡಾ. ಸುರೇಶ್ ಇಟ್ನಾಳ, ಡಿವೈಎಸ್ಪಿ ರಾಮನಗೌಡ ಹಟ್ಟಿ, ಆಹಾರ ಇಲಾಖೆಯ ಜಂಟಿನಿರ್ದೇಶಕ ಡಾ.ಸದಾಶಿವ ಮರ್ಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News