"ಇನ್ನಾದರೂ ದೇಶದ ಆರ್ಥಿಕ ಸ್ಥಿತಿಯ ಬಗ್ಗೆ, ನರಳುತ್ತಿರುವ ಜನರ ಬಗ್ಗೆ ಸ್ವಲ್ಪ ಗಮನಹರಿಸಿ"

Update: 2019-08-06 15:56 GMT

ಬೆಂಗಳೂರು, ಆ.6: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಯಿತಲ್ಲಾ, ಈಗಲಾದರೂ ದೇಶದ ಕುಸಿಯುತ್ತಿರುವ ಆರ್ಥಿಕ ಸ್ಥಿತಿಯ ಬಗ್ಗೆ, ಕರ್ನಾಟಕದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ನರಳುತ್ತಿರುವ ಜನರ ಬಗ್ಗೆ ಸ್ವಲ್ಪ ಗಮನಹರಿಸುತ್ತೀರಾ ಪ್ರಧಾನಮಂತ್ರಿ ಅವರೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಸರಣಿ ಟ್ವೀಟ್‌ಗಳನ್ನು ಮಾಡಿರುವ ಸಿದ್ದರಾಮಯ್ಯ, ಪ್ರಣಾಳಿಕೆಯಲ್ಲಿನ ಆಶ್ವಾಸನೆಯಂತೆ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದೀರಿ ಎನ್ನುತ್ತೀರಲ್ಲಾ ನರೇಂದ್ರಮೋದಿ ಅವರೇ, ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು, ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿಟ್ಟು, ಸೈನಿಕರ ಕಾವಲು ಹಾಕಿ ಇದನ್ನು ಮಾಡ್ತೀರಿ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ ಎನ್ನುತ್ತಿವೆ ದಾಖಲೆಗಳು. ಇದಕ್ಕೆ ಕಾರಣ ಸಂವಿಧಾನದ 370ನೇ ವಿಧಿಯೇ? ಇಲ್ಲವೇ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲಿಕ್ಕಾಗದ ನಿಮ್ಮ ಅಸಾಮರ್ಥ್ಯವೇ ? ಎಂದು ಅವರು ಕೇಳಿದ್ದಾರೆ.

ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದಾಗ, ಸ್ವರ್ಣಮಂದಿರದಲ್ಲಿದ್ದ ಉಗ್ರಗಾಮಿಗಳನ್ನು ಖಾಲಿ ಮಾಡಿಸಿದಾಗ, ಶ್ರೀಮತಿ ಇಂದಿರಾಗಾಂಧಿಯವರು ರಾಜಕೀಯವಾಗಿ ಬಳಸಿಕೊಳ್ಳಲಿಲ್ಲ, ಅದು ತಮ್ಮ ಕರ್ತವ್ಯ ಎಂದು ತಿಳಿದಿದ್ದರು. ನರೇಂದ್ರಮೋದಿಯವರೇ ನೀವ್ಯಾಕೆ ಪ್ರತಿ ಕೆಲಸವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ತಿದ್ದೀರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News