ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ವರ್ಗಾವಣೆ
ಶಿವಮೊಗ್ಗ, ಆ. 6: ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅವರನ್ನು ಬೆಂಗಳೂರಿನ ಕಬ್ಬು-ಸಕ್ಕರೆ ಅಭಿವೃದ್ದಿ ನಿಗಮದ ನಿರ್ದೇಶಕರಾಗಿ ನೇಮಿಸಲಾಗಿದೆ.
ಕೆ.ಎ.ದಯಾನಂದ್‍ರವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಕೆ.ಬಿ.ಶಿವಕುಮಾರ್ ರನ್ನು ನಿಯೋಜಿಸಲಾಗಿದೆ. ಇವರು ಪ್ರಸ್ತುತ ಬೆಂಗಳೂರಿನ ಆಡಳಿತ ಸುಧಾರಣೆ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೆ.ಬಿ.ಶಿವಕುಮಾರ್ ರವರು 2010 ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರು ಮೂಲತಃ ತಮಿಳುನಾಡು ರಾಜ್ಯದವರಾಗಿದ್ದು, ವಿಜಯಪುರ ಹಾಗೂ ಮೈಸೂರು ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಣೆ ಮಾಡಿದ ಅನುಭವ ಇದೆ.
ದಿಢೀರ್ ವರ್ಗ: ಬಿ.ಎಸ್.ಯಡಿಯೂರಪ್ಪರವರು ಮುಖ್ಯಮಂತ್ರಿಯಾದ ನಂತರ ಜಿಲ್ಲೆಯ ಪ್ರಮುಖ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ಇತ್ತೀಚೆಗಷ್ಟೆ ಜಿಲ್ಲಾ ರಕ್ಷಣಾಧಿಕಾರಿ ಡಾ.ಎಂ.ಅಶ್ವಿನಿಯವರನ್ನು ವರ್ಗಾಯಿಸಲಾಗಿತ್ತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿಯ ವರ್ಗಾವಣೆಯೂ ಆಗಿದೆ. ಡಿಸಿ ದಯಾನಂದ್‍ರವರು ಉತ್ತಮ ಕಾರ್ಯನಿರ್ವಹಣೆಯ ಮೂಲಕ ಗಮನ ಸೆಳೆದಿದ್ದರು. ಜನತಾ ದರ್ಶನ, ಗ್ರಾಮ ವಾಸ್ತವ್ಯ, ಪರಿಸರ ಪ್ರಶಸ್ತಿ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದರು.