ಆ.8ರಂದು 'ಮಾರಾಟವಾದ ಶಾಸಕರು' ಘೋಷಣೆಯಡಿ ಧರಣಿ

Update: 2019-08-06 18:14 GMT

ಬೆಂಗಳೂರು, ಆ.6: ಅನರ್ಹಗೊಂಡಿರುವ 17 ಶಾಸಕರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪ್ರತಿಭಟನಾ ಧರಣಿ ನಡೆಸಲು ಸಜ್ಜಾಗಿದ್ದು, ಆ.8ರಂದು ಸೇಲ್ ಆದ ಶಾಸಕರು ಘೋಷಣೆಯಡಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.

ನಗರದ ಮೂರು ಕ್ಷೇತ್ರಗಳಲ್ಲಿ ಯಾವುದಾದರೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಧರಣಿ ನಡೆಯಲಿದ್ದು, ರಾಜ್ಯಮಟ್ಟದ ಬಹುತೇಕ ನಾಯಕರು ಭಾಗವಹಿಸಲಿದ್ದಾರೆ. ನಂತರ ಎಲ್ಲ ಕ್ಷೇತ್ರಗಳಲ್ಲೂ ಪ್ರತಿಭಟನೆ ಮುಂದುವರಿಯಲಿದ್ದು, ಇದರಲ್ಲಿ ಪ್ರಮುಖರು ಕಡ್ಡಾಯವಾಗಿ ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ಉಪಚುನಾವಣೆ ಎದುರಿಸಲು ಸಿದ್ಧತೆ ಆರಂಭಿಸಿದ್ದು, 17 ಕ್ಷೇತ್ರಗಳಿಗೂ ವೀಕ್ಷಕರನ್ನು ನೇಮಕ ಮಾಡುವ ಮೂಲಕ ಪಕ್ಷ ಸಂಘಟಿಸುವ ಕೆಲಸದಲ್ಲಿ ಮುಖಂಡರು ತೊಡಗಿಸಿಕೊಂಡಿದ್ದಾರೆ. ಅನರ್ಹರು ಮತ್ತೊಮ್ಮೆ ಸ್ಪರ್ಧಿಸಿದರೆ ಅಥವಾ ಅವರ ಕುಟುಂಬದವರು, ಸಂಬಂಧಿಕರು ಸ್ಪರ್ಧಿಸಿದರೂ ಸೋಲಿಸಲು ಪಣತೊಟ್ಟಿದ್ದಾರೆ. ರಾಜಕೀಯವಾಗಿ ತೀವ್ರ ಹಿನ್ನಡೆ ಉಂಟಾಗುವಂತೆ ಮಾಡಲು ಕಾರ್ಯತಂತ್ರ ಹೆಣೆಯಲಾಗಿದೆ.

ಕಾಂಗ್ರೆಸ್ ಬಿಟ್ಟು ತಪ್ಪುಮಾಡಿದೆವು ಎಂಬ ಕೊರಗು ಕಾಡಬೇಕು. ಪಕ್ಷ ಬಿಟ್ಟು ಹೋದವರಿಗೆ ಹಾಗೂ ಪಕ್ಷಾಂತರಿಗಳಿಗೆ ಇದೊಂದು ರೀತಿಯ ಪಾಠ ಆಗಬೇಕು. ಆ ಕಾರಣಕ್ಕೆ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಾರಿ ಒಂದು ಸಂದೇಶವಂತೂ ರವಾನೆಯಾಗಬೇಕಿದೆ ಎಂದು ಕೆಪಿಸಿಸಿ ಮುಖಂಡರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News