ಸಂವಿಧಾನದ 370ನೇ ವಿಧಿ ರದ್ದು: ಕೇಂದ್ರದ ನಿರ್ಧಾರಕ್ಕೆ ಎಸ್‌ಡಿಪಿಐ ಖಂಡನೆ

Update: 2019-08-06 18:15 GMT

ಹೊಸದಿಲ್ಲಿ, ಆ.6: ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುವಂತಹ ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದು ಮಾಡಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ತೀವ್ರವಾಗಿ ಖಂಡಿಸಿದ್ದು, ಇದು ಕಾಶ್ಮೀರಿ ಜನರ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, 370ನೇ ವಿಧಿಯು 1947ರಲ್ಲಿ ಭಾರತ ಮತ್ತು ಮಹಾರಾಜ ಹರಿಸಿಂಗ್ ಅವರ ನಡುವೆ ನಡೆದ ಒಪ್ಪಂದದ ಪ್ರಮುಖ ಅಂಶವಾಗಿದೆ. ಇದರ ರದ್ದುಗೊಳಿಸುವಿಕೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ತಿಳಿಸಿದ್ದಾರೆ.

ಈ ವಿಧಿಯು ರಾಜ್ಯದೊಂದಿಗಿನ ಕೇಂದ್ರದ ಸಂಬಂಧಗಳನ್ನು ನಿರ್ವಹಿಸುವ ಕಾರ್ಯ ವಿಧಾನವಾಗಿ ಕಾರ್ಯ ನಿರ್ವಹಿಸಿದೆ. ಸ್ವಾಯತ್ತತೆಯ ಹೊರತಾಗಿ, ಇತರ ವಿಷಯಗಳ ಪಟ್ಟಿಗೆ ತಿದ್ದುಪಡಿ ಮಾಡಲು ಕೇಂದ್ರ ಸರಕಾರ ಯೋಜಿಸಿದರೆ ರಾಜ್ಯ ಸರಕಾರದ ಒಪ್ಪಿಗೆಯ ಅಗತ್ಯತೆಯಂತಹ ಇತರ ಅಧಿಕಾರಗಳನ್ನು ಇದು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಈ ವಿಧಿಯು ಸಂವಿಧಾನದ ಶಾಶ್ವತ ಲಕ್ಷಣವಾಗಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು 370ನೇ ವಿಧಿ ಸಂವಿಧಾನದ ಶಾಶ್ವತ ನಿಬಂಧನೆ ಎಂದು ಮತ್ತೆ ಮತ್ತೆ ತಮ್ಮ ತೀರ್ಪಿನಲ್ಲಿ ಎತ್ತಿ ಹಿಡಿದಿವೆ. 2018ರಲ್ಲಿ ನೀಡಿದ ತೀರ್ಪಿನಲ್ಲಿ, ಸುಪ್ರೀಂಕೋರ್ಟ್, ಈ ವಿಧಿಯ ಶೀರ್ಷಿಕೆಯು ಅದನ್ನು ತಾತ್ಕಾಲಿಕ ಎಂದು ಗುರುತಿಸಿದ್ದರೂ, ಅದು ಶಾಶ್ವತ ಸ್ವರೂಪದ್ದಾಗಿದೆ ಎಂದು ಹೇಳಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು 2014ರಿಂದ ಕಣಿವೆಯಲ್ಲಿ ತೀವ್ರ ಸೇನಾಬಲವನ್ನು ಬಳಸಿದೆ ಮತ್ತು ಶೋಚನೀಯವಾಗಿ ವಿಫಲವಾಗಿದೆ. ಹಿಂದುತ್ವ ಶಕ್ತಿಯನ್ನು ಸಮಾಧಾನ ಪಡಿಸಲು ಸರಕಾರ ಪ್ರಯತ್ನಿಸುತ್ತಿದೆ ಎಂಬುದು ಇದರಿಂದ ಬಹಳ ಸ್ಪಷ್ಟವಾಗಿದೆ ಎಂದು ಫೈಝಿ ತಿಳಿಸಿದ್ದಾರೆ.

ಈ ಕಠಿಣ ಮತ್ತು ಅವಿವೇಕದ ಕ್ರಮದಿಂದ ಗೃಹ ಸಚಿವರು ಕಾಶ್ಮೀರದ ಮಧ್ಯಮ ವರ್ಗಗಳನ್ನು ದೂರವಿಟ್ಟು ಮತ್ತು ಸೇನೆಯನ್ನು ಬಳಸುವ ಮೂಲಕ ಜನರ ಸಂವಿಧಾನಾತ್ಮಕ ಹಕ್ಕುಗಳನ್ನು ನಿಗ್ರಹಿಸಬಹುದು ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News