ರಾಜ್ಯದ ಹಲವೆಡೆ ಭಾರೀ ಮಳೆ: ಸುರಕ್ಷಿತ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಕೆಎಸ್ಸಾರ್ಟಿಸಿ ಚಾಲಕರಿಗೆ ಸೂಚನೆ

Update: 2019-08-06 18:17 GMT

ಬೆಂಗಳೂರು, ಆ.6: ರಾಜ್ಯದ ಹಲವಾರು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಪ್ರಯಾಣಿಕರ ಹಿತದೃಷ್ಟಿಯಿಂದ ಕೆಎಸ್ಸಾರ್ಟಿಸಿ ಬಸ್‌ಗಳು ಸುರಕ್ಷಿತ ಪ್ರರ್ಯಾಯ ಮಾರ್ಗಗಳಲ್ಲಿ ಸಂಚರಿಸುವ ಮೂಲಕ ಪ್ರಯಾಣಿಕರನ್ನು ಸುರಕ್ಷತೆಯಿಂದ ಕರೆದೊಯ್ಯಬೇಕೆಂದು ಕೆಎಸ್ಸಾರ್ಟಿಸಿ ಸೂಚಿಸಿದೆ.

ಮುಂಗಡವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಿದ ಹಾಗೂ ಅತಿ ಅವಶ್ಯ ಕೆಲಸಗಳಿಗಾಗಿ ಮಳೆ ಪೀಡಿತ ಪ್ರದೇಶಗಳಿಂದ ಬೆಂಗಳೂರು ಮತ್ತು ಇತರೆ ಸ್ಥಳಗಳಿಗೆ ಪ್ರಯಾಣ ಮಾಡುವ ಸಾರ್ವಜನಿಕ ಪ್ರಯಾಣಿಕರನ್ನು ಸುರಕ್ಷಿತ ಪರ್ಯಾಯ ಮಾರ್ಗಗಳಲ್ಲಿ ನಿಗಧಿತ ಸ್ಥಳಗಳಿಗೆ ತಲುಪಿಸಲು ಆದ್ಯತೆ ತೋರಬೇಕು. ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅವರ ವಿಭಾಗದ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವ ಪ್ರದೇಶಗಳು ಹಾಗೂ ರಸ್ತೆ ಕುಸಿತ ಉಂಟಾಗಿದ್ದರೆ, ಆಗ್ಗಿಂದ್ದಾಗೆ ಮಾಹಿತಿ ಪಡೆದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಬಸ್‌ಗಳ ಅಲಭ್ಯತೆಯಿಂದ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಡಿಡಿಪಿಐ, ಪೊಲೀಸ್ ಇಲಾಖೆ, ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು, ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಅನಾನುಕೂಲವಾಗದಂತೆ ಅಗತ್ಯಕ್ರಮ ಕೈಗೊಳ್ಳಬೇಕು. ಅಲ್ಲದೆ, ಭಾರೀ ಮಳೆಯಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದಲ್ಲಿ, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವುದು.

ಜಿಲ್ಲಾಡಳಿತದ ಸೂಚನೆ ಮೇರೆಗೆ ಅವಶ್ಯಕತೆಗೆ ಅನುಗುಣವಾಗಿ ಆದ್ಯತೆಯನುಸಾರ ಬಸ್ ವ್ಯವಸ್ಥೆ ಮಾಡುವುದು. ಹಾಗೂ ಸಾರ್ವಜನಿಕ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಮಾನವೀಯತೆ ನೆಲೆಯಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

ವಿಭಾಗ ಮಟ್ಟದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ವ್ಯವಸ್ಥೆ ಮಾಡಬೇಕು. ವಲಯವಾರು ಉಸ್ತುವಾರಿ ಅಧಿಕಾರಿ, ಸಿಬ್ಬಂದಿಗಳ ತಂಡಗಳನ್ನು ರಚಿಸತಕ್ಕದ್ದು, ನೆರೆ ಪ್ರದೇಶಗಳ ಪರಿಸ್ಥಿತಿ, ನಿಗಮದ ಸಾರಿಗೆಗಳ ಕಾರ್ಯಾಚರಣೆ, ಅವಘಡ, ಮುಂತಾದವುಗಳ ಬಗ್ಗೆ ನಿಯಂತ್ರಣ ಕೊಠಡಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ಒದಗಿಸುವುದು ಅಗತ್ಯವಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News