ಸುಷ್ಮಾ ಸ್ವರಾಜ್ ನಿಧನ: ದೇವೇಗೌಡ, ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

Update: 2019-08-07 12:30 GMT

ಬೆಂಗಳೂರು, ಆ. 7: ಕೇಂದ್ರದ ಮಾಜಿ ಸಚಿವೆ ಹಾಗೂ ಹಿರಿಯ ರಾಜಕೀಯ ನಾಯಕ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಾತೃ ಹೃದಯಿ ಮಹಿಳೆ: ಸಹೋದರಿ ಸುಷ್ಮಾ ಸ್ವರಾಜ್ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ತೀವ್ರ ನೋವುಂಟಾಗಿದೆ. ಅವರನ್ನು ನೋಡಿದ ತಕ್ಷಣ ಎಲ್ಲರಲ್ಲೂ ತಾಯಿ ಮನೋಭಾವ ಮೂಡುತಿತ್ತು. ಆಕೆ ಅತೀ ಚಿಕ್ಕ ವಯಸ್ಸಿನಲ್ಲೇ ಹರಿಯಾಣ ರಾಜ್ಯದಲ್ಲಿ ಸಂಪುಟ ದರ್ಜೆ ಸಚಿವೆ ಆಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ಸ್ಮರಿಸಿದ್ದಾರೆ.

ಈ ದೇಶದ ಎರಡನೇ ಮಹಿಳಾ ವಿದೇಶಾಂಗ ಸಚಿವೆಯಾಗಿಯೂ ಉತ್ತಮ ಕಾರ್ಯ ನಿರ್ವಹಿಸಿದ್ದರು. ಸುಷ್ಮಾ ನಿಧನದಿಂದ ನಮ್ಮ ದೇಶ ಒಬ್ಬ ಧೈರ್ಯವಂತೆ ಹಾಗೂ ಮಾತೃ ಹೃದಯಿ ಹೆಣ್ಣು ಮಗಳನ್ನ ಕಳೆದು ಕೊಂಡಿದ್ದೀವಿ. ಅವರ ನಿದನದಿಂದ ರಾಷ್ಟ್ರಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ದೇವೇಗೌಡ ಪ್ರಾರ್ಥಿಸಿದ್ದಾರೆ.

ತುಂಬಲಾರದ ನಷ್ಟ: ಅಪ್ರತಿಮ ವಾಗ್ಮಿ, ಅಸಾಧಾರಣ ರಾಜಕಾರಣಿ, ಅದ್ಭುತ ಸಂಸದೀಯ ಪಟು, ವಿನಯ, ಧೈರ್ಯ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಹಿರಿಯರಾಜಕಾರಣಿ ಸುಷ್ಮಾ ಸ್ವರಾಜ್‌ಅವರು ಅಕಾಲಿಕ ನಿಧನ ಆಘಾತವಾಗಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

1980ರಲ್ಲಿ ನಾನು ಜನತಾಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿರುವ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಹಳಿಯಾಳ, ದಾಂಡೇಲಿ ಹಾಗೂ ಯಲ್ಲಾಪುರಗಳಲ್ಲಿ ನನ್ನ ಪರವಾಗಿ ಪ್ರಚಾರ ಸಭೆಗಳಲ್ಲಿ ಭಾಷಣ ಮಾಡಿದ್ದು ನನ್ನ ಸ್ಮತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಸ್ಮರಿಸಿದ್ದಾರೆ.

ಯುವ ಸಮುದಾಯಕ್ಕೆ ಮಾದರಿ: ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ತಮ್ಮ ಹೋರಾಟ ಹಾಗೂ ಬದುಕಿನ ಮೂಲಕ ದೇಶದ ಯುವ ಸಮುದಾಯಕ್ಕೆ ಮಾದರಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.

ಮಾತೃ ಹೃದಯ, ದಿಟ್ಟತನ ಎರಡೂ ಮೇಳೈಸಿದ್ದ ಸುಷ್ಮಾ ಅವರು ಚುರುಕುಮತಿ ಹಾಗೂ ಧೀರೋದಾತ್ತ ರಾಜಕಾರಣಿ ಆಗಿದ್ದರು. ಹೀಗಾಗಿಯೇ ಸಣ್ಣ ವಯಸ್ಸಿನಲ್ಲೇ ಶಾಸನಸಭೆ ಪ್ರವೇಶಿಸಿದರು. ಪಕ್ಷ, ತತ್ವ-ಸಿದ್ಧಾಂತ ಮೀರಿ ಸರ್ವರನ್ನೂ ಒಳಗೊಳ್ಳುವ ಅವರ ಹೃದಯ ವೈಶಾಲ್ಯ, ಸಮನ್ವಯ ಭಾವ ಎಲ್ಲರ ಮನಗೆದ್ದಿತ್ತು.

ನೇರ ನಡೆ-ನುಡಿಗೆ ಹೆಸರಾಗಿದ್ದ ಅವರು ಉತ್ತಮ ಸಂಸದೀಯ ಪಟುವಾಗಿದ್ದರು. ಅವರ ವಾಗ್ಝರಿ ದೇಶ-ವಿದೇಶಗಳ ಮನಗೆದ್ದಿತ್ತು. ಕೇಂದ್ರ ಸಚಿವ ಸ್ಥಾನ, ದಿಲ್ಲಿ ಸಿಎಂ ಪದವಿ ಸೇರಿದಂತೆ ತಾವು ವಹಿಸಿಕೊಂಡ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅಂಥ ಸುಷ್ಮಾ ಸ್ವರಾಜ್ ಅವರ ಅಗಲಿಕೆ ಅತೀವ ನೋವು ತಂದಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಸುಷ್ಮಾ ಸ್ವರಾಜ್ ಅವರ ನಿಧನ ಇಡೀ ದೇಶಕ್ಕೆ ಭರಿಸಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಬಂಧುಗಳು, ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಶಿವಕುಮಾರ್ ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

‘ಕೇಂದ್ರದ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಸ್ವ ಸಾಮರ್ಥ್ಯದಿಂದ ರಾಜಕೀಯವಾಗಿ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾಗಲೇ ಅವರ ಬದುಕಿನ ಪಯಣ ಹಠಾತ್ತನೆ ಕೊನೆಗೊಂಡಿದ್ದು ವಿಷಾದನೀಯ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News