370ನೇ ವಿಧಿ ರದ್ದತಿ ಖಂಡಿಸಿ ದಾವಣಗೆರೆಯಲ್ಲಿ ಸಿಪಿಐ, ಸಿಪಿಐಎಂ ಪ್ರತಿಭಟನೆ

Update: 2019-08-07 13:03 GMT

ದಾವಣಗೆರೆ, ಆ.6: ಕೇಂದ್ರ ಸರಕಾರ ಜಮ್ಮು- ಕಾಶ್ಮೀರದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ಎಡಪಕ್ಷಗಳ ಒಕ್ಕೂಟ(ಸಿಪಿಐ, ಸಿಪಿಐಎಂ ) ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು. 

ಇಲ್ಲಿನ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಎಡಪಕ್ಷಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಿಪಿಐ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ, ಕೇಂದ್ರದ ಮೋದಿ ಸರಕಾರವು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ದೊಡ್ಡ ಹೊಡೆತ ನೀಡಿದೆ. 1947ರಲ್ಲಿ ಪಾಕಿಸ್ತಾನದ ಅಕ್ರಮಣದ ಹಿನ್ನಲೆಯಲ್ಲಿ ಕಾಶ್ಮೀರದ ಜನರು ಭಾರತವನ್ನು ಒಪ್ಪಿಕೊಂಡರು. ಮತ್ತು 370 ನೇ ವಿಧಿಯಲ್ಲಿ ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಮತ್ತು ಭಾರತದ ಒಕ್ಕೂಟದೊಳಗೆ ಸ್ವಾಯತ್ತತೆಯನ್ನು ಒದಗಿಸುವ ಬದ್ಧತೆಯನ್ನು ಅಂದಿನ ಭಾರತ ಸರಕಾರ ನೀಡಿತ್ತು. ಇದಕ್ಕೆ ಮೋದಿ ಸರಕಾರವು ದ್ರೋಹ ಮಾಡಿದೆ. ಈ ರಾಜ್ಯವನ್ನು ಬಹು ರಾಷ್ಟ್ರೀಯ ಕಂಪನಿಗಳಿಗೆ ಕೊಳ್ಳೆ ಹೊಡೆಯಲು ಅನುಕೂಲ ಮಾಡಿಕೊಡುತ್ತಿದೆ ಎಂದು ಅಸಮಾಧಾನ ವ್ಯಕಪಡಿಸಿದರು. 

ನಮಗೆ 5 ವರ್ಷ ಕೊಡಿ ಕಾಶ್ಮೀರವನ್ನು ಅಭಿವೃದ್ಧಿ ಮಾಡುತ್ತೇವೆ, ಇಲ್ಲಿನ ಜನರು ಬಡವರಾಗಿಯೇ ಇರಬೇಕೇ ಎಂದು ಸುಳ್ಳಿನ ಸರದಾರರಾದ ಅಮಿತ್ ಶಾ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ದೇಶದ ಏಕತೆ ಅದರ ವೈವಿಧ್ಯತೆಯಲ್ಲಿದೆಯೆಂಬುದನ್ನು ಸಾರ್ವತ್ರಿಕವಾಗಿ ಒಪ್ಪಲಾಗಿದೆ. ಆದರೆ, ಆರೆಸ್ಸೆಸ್, ಬಿಜೆಪಿ ಈ ವೈವಿಧ್ಯತೆ ಮತ್ತು ಒಕ್ಕೂಟ ತತ್ವವನ್ನು ಸಹಿಸುವುದಿಲ್ಲ. ಮೋದಿ ಸರ್ಕಾರದ ನಡೆಯುವ ಸಂಘದ ಅಜೆಂಡಾ ಪೂರೈಸುವ ಭಾಗವಾಗಿದೆ. ರಾಷ್ಟ್ರೀಯ ಏಕತೆ, ಭಾರತದ ಒಕ್ಕೂಟ ಪರಿಕಲ್ಪನೆ ಮೇಲೆ ದಾಳಿ ನಡೆಸಿದೆ ಎಂದು ಅವರು ಆರೋಪಿಸಿದರು. 

ಮೋದಿ ಸರ್ಕಾರದ ಪಿತೂರಿ, ಸರ್ವಾಧಿಕಾರಿ ಕ್ರಮಗಳ ಮೂಲಕ ಕಾಶ್ಮೀರದ ರಾಜಕೀಯ ನಾಯಕರನ್ನು ಬಂಧಿಸಿದ್ದು, ಸಂಪರ್ಕ ಕಡಿತ ಮಾಡಿದ್ದು, ಸಾರ್ವಜನಿಕ ಚಲನವಲಯಗಳ ಮೇಲೆ ನಿಷೇಧ, ಸಾವಿರಾರು ಸೈನಿಕರ ನಿಯೋಜನೆ ಇದರ ಭಾಗವಾಗಿದೆ. ಜಮ್ಮು ಮತ್ತು ಕಾಶ್ಮೀರದ ಜನತೆ, ಅಲ್ಲಿನ ರಾಜಕೀಯ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪರಸ್ಪರ ಮಾತುಕತೆ, ಪ್ರಕ್ರಿಯೆ ಮೂಲಕ ಕ್ರಮ ವಹಿಸದೇ, ಬಹುಮತದ ಹಮ್ಮಿನಲ್ಲಿ ಕೈಗೊಂಡ ಈ ಹೆಜ್ಜೆಯು ಜಮ್ಮು-ಕಾಶ್ಮೀರದ ಜನರಲ್ಲಿ ಪರಕೀಯತೆ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. 

ಸಿಪಿಐಎಂ ಮುಖಂಡ ಕೆ.ಲಕ್ಷ್ಮೀನಾರಾಯಣ ಭಟ್ ಮಾತನಾಡಿ, 5 ವರ್ಷ ಕೊಡಿ ಕಾಶ್ಮೀರವನ್ನು ಅಭಿವೃದ್ಧಿ ರಾಜ್ಯವಾಗಿಸುತ್ತೇವೆ, ಅಲ್ಲಿನ ಜನರು ಬಡವರಾಗಿಯೇ ಇರಬೇಕೆಂದು ಬಯಸುತ್ತೀರಾ ಅಂದೆಲ್ಲಾ 370ನೇ ವಿಧಿ ರದ್ಧುಪಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸುತ್ತಾರೆ. ಕಳೆದ 15-20 ವರ್ಷದಿಂದ ಬಿಜೆಪಿ ಆಳ್ವಿಕೆಯ ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಇತರೆ ರಾಜ್ಯಗಳು ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಾಗಿಯೇ ಇಲ್ಲಿವರೆಗೂ ಉಳಿದಿರುವುದು ಏಕೆ ಎಂದು ಪ್ರಶ್ನಿಸಿದರು.

ಐದು ವರ್ಷ ಅವಕಾಶ ಕೊಡಿ ದೇಶ ಅಭಿವೃದ್ಧಿಪಡಿಸುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ಕೈಗಾರಿಕೆಗಳ ಅಭಿವೃದ್ಧಿ ಪಡಿಸುತ್ತೇವೆ, ಬೆಲೆ ಏರಿಕೆಗೆ ಕಡಿವಾಣ ಹಾಕುತ್ತೇವೆ, ಮಹಿಳಾ-ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುತ್ತೇವೆ, ಕೃಷಿ ಕ್ಷೇತ್ರ ಅಭಿವೃದ್ಧಿಪಡಿಸಿ, ರೈತರ ಆತ್ಮಹತ್ಯೆ ತಡೆಯುತ್ತೇವೆ, ಎಲ್ಲರಿಗೂ ಒಳ್ಳೆಯ ದಿನ ತರುತ್ತೇವೆ, ವಿದೇಶದಿಂದ ಕಪ್ಪು ಹಣ ತರುತ್ತೇವೆಂದು ಸುಳ್ಳು ಭರವಸೆ ನೀಡಿದ್ದ ಮೋದಿ ತಮ್ಮ 63 ತಿಂಗಳ ಅಧಿಕಾರಾವದಿಯಲ್ಲಿ ಏನು ಮಾಡಿದ್ದಾರೆ ಎಂದು ಜನರಿಗೆ ಉತ್ತರಿಸಲಿ ಎಂದು ಅವರು ಆಗ್ರಹಿಸಿದರು.

ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ, ರಾಜಸ್ಥಾನ, ಕರ್ನಾಟಕ ಮೊದಲಾದ ರಾಜ್ಯಗಳಲ್ಲಿ ಹಿಂದುಳಿದ ಪ್ರದೇಶಗಳ, ಹಿಂದುಳಿದ ಜನರ ಅಭಿವೃದ್ಧಿಗೆ ಕೇಂದ್ರವು 63 ತಿಂಗಳಲ್ಲಿ ಏನು ಮಾಡಿದೆ? ಬಡತನ, ನಿರುದ್ಯೋಗ, ಹಸಿವು ಮೊದಲಾದ ಸಮಸ್ಯೆಗಳು ಕೇವಲ ಜಮ್ಮು ಮತ್ತು ಕಾಶ್ಮೀರದಲ್ಲಷ್ಟೇ ಇವೆಯೇ? ಇನ್ನಿತರೆ ರಾಜ್ಯಗಳ ಜನರ ಬದುಕು ಸುಖ, ಸಮೃದ್ಧಿಯಿಂದ ಕೂಡಿದೆಯೇ? ಸುಳ್ಳುಗಳ ಅಪಪ್ರಚಾರ, ಭ್ರಮೆಗಳು ಭರವಸೆ, ಬಹುಮತದ ಅಹಂನಿಂದ ಬಹುರಾಷ್ಟ್ರೀಯ ಕಂಪನಿಗಳು, ಬಂಡವಾಳ ಶಾಹಿಗಳ ಸೇವೆ ಮಾಡುವುದನ್ನು ಕೈಬಿಟ್ಟು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರೀತಿಯಲ್ಲಿ ಮೋದಿ ಸರ್ಕಾರ ಆಡಳಿತ ನಡೆಸಲಿ ಎಂದು ಅವರು ತಾಕೀತು ಮಾಡಿದರು. 

ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಮುಖಂಡರಾದ ಆವರಗೆರೆ ವಾಸು, ಆವರಗೆರೆ ಎಚ್.ಜಿ.ಉಮೇಶ್, ಆವರಗೆರೆ ಚಂದ್ರು, ಸಿಪಿಐಎಂ ಮುಖಂಡರಾದ ಟಿ.ವಿ. ರೇಣುಕಮ್ಮ, ಕೆ.ಎಚ್.ಆನಂದರಾಜು, ಶ್ರೀನಿವಾಸ, ತಿಮ್ಮಪ್ಪ, ಐರಣಿ ಚಂದ್ರು, ಎನ್.ಎಚ್.ರಾಮಪ್ಪ, ಎನ್.ಟಿ.ಬಸವರಾಜ, ಎಚ್.ಪಿ.ಉಮಾಪತಿ, ಆರ್.ಸುರೇಶ,  ವಿ.ಲಕ್ಷ್ಮಣ, ಸುರೇಶ, ಎಂ.ಬಿ.ಶಾರದಮ್ಮ, ವಿಶಾಲಾಕ್ಷಿ ಇತರರು ಪ್ರತಿಭಟನೆಯಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News