ಕಾಲು ಜಾರಿ ಬಿದ್ದು ಹೇಮಾವತಿ ನದಿಯಲ್ಲಿ ಕೊಚ್ಚಿ ಹೋದ ಯುವಕ

Update: 2019-08-07 14:32 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಆ. 7: ಭತ್ತದ ಗದ್ದೆಯಲ್ಲಿ ನಿಲ್ಲಿಸಿದ್ದ ಟಿಲ್ಲರ್ ನೋಡಲು ಹೋಗಿ ತುಂಬಿ ಹರಿಯುತ್ತಿರುವ ಹೇಮಾವತಿ ನದಿಗೆ ಯುವಕನೋರ್ವ ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಘಟನೆ ಬುಧವಾರ ಸಂಜೆ ಜಿಲ್ಲೆಯ ಹಾಲೂರು ಗ್ರಾಮದಲ್ಲಿ ನಡೆದಿದೆ. 

ಮೂಡಿಗೆರೆ ತಾಲೂಕಿನ ಹಾಲೂರು ಗ್ರಾಮದ ಶ್ರೀವತ್ಸ (21) ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಶೋಧಕಾರ್ಯ ನಡೆಸಲಾಗುತ್ತಿದೆ. ಹಾಲೂರು ಗ್ರಾಮದಲ್ಲಿ ಹೇಮಾವತಿ ನದಿ ಪಕ್ಕದಲಿರುವ ತನ್ನ ಜಮೀನಿನಲ್ಲಿ ಜಮೀನು ಕೆಲಸಕ್ಕೆಂದು ನಾಲ್ಕು ದಿನಗಳ ಹಿಂದೆ ಶ್ರೀವತ್ಸ ಟಿಲ್ಲರ್ ನಿಲ್ಲಿಸಿದ್ದ ಎನ್ನಲಾಗಿದ್ದು, ಬುಧವಾರ ಹೇಮಾವತಿ ನದಿ ನೀರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ 4:30ರ ವೇಳೆ ಟಿಲ್ಲರ್ ನೋಡಲು ಶ್ರೀವತ್ಸ ಮನೆಯಿಂದ ತೆರಳಿದ್ದ ಎನ್ನಲಾಗಿದೆ.

ನದಿಯ ಬಳಿಯಲ್ಲಿನ ಜಮೀನಿನಲ್ಲಿ ನಿಲ್ಲಿಸಿದ್ದ ಟಿಲ್ಲರ್ ಬಳಿ ಶ್ರೀವತ್ಸ ಹೋಗಿದ್ದಾಗ ನದಿಯ ನೀರಿನ ತೀವ್ರತೆ ಅರಿಯದೆ ಕಾಲುಜಾರಿ ನದಿಗೆ ಬಿದ್ದು ಕೊಚ್ಚಿಹೋಗಿದ್ದಾನೆಂದು ಹೇಳಲಾಗುತ್ತಿದೆ. ಈ ಸಂಬಂಧ ಶ್ರೀವತ್ಸನ ಕುಟುಂಬದವರು ಗೋಣಿಬೀಡು ಪೊಲೀಸರಿಗೆ ದೂರು ನೀಡಿದ್ದು, ಸ್ಥಳದಲ್ಲಿ ಅಗ್ನಿಶಾಮಕ ದಳ, ಪೊಲೀಸ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News