ಬೆಳಗಾವಿಯಲ್ಲಿ ಇನ್ನು ಎರಡು ದಿನ ಅತೀ ಹೆಚ್ಚು ಮಳೆ ಸಾಧ್ಯತೆ

Update: 2019-08-07 14:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.7: ಮಹಾರಾಷ್ಟ್ರ ರಾಜ್ಯದ ಕೃಷ್ಣಾ ಮೇಲ್ಮೈಯಲ್ಲಿ ತೀವ್ರ ಮಳೆಯಾಗಿದ್ದು, ಮುಂದಿನ ನಾಲ್ಕು ದಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಯಲ್ಲಿ ಮಳೆ ಮುಂದುವರೆಯುವ ಸಂಭವವಿದೆ. ರಾತ್ರಿ ಸುಮಾರು 8 ಗಂಟೆಗೆ ಬೆಳಗಾವಿ ಜಿಲ್ಲೆಯ ಗಡಿಗೆ ಸುಮಾರು 3.46 ಲಕ್ಷ ಕ್ಯೂಸೆಕ್ಸ್‌ಗಿಂತ ಹೆಚ್ಚು ನೀರು ಹರಿದು ಬರುವ ಸಾಧ್ಯತೆಯಿದೆ.

ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಇಂದಿನ ನೀರಿನ ಮಟ್ಟ 517.23 ಮೀಟರ್ ಇದೆ. ಜಲಾಶಯದಲ್ಲಿ ಒಳ ಹರಿವು 3.64 ಲಕ್ಷ ಕ್ಯೂಸೆಕ್ಸ್ ಇದ್ದು, ಹೊರ ಹರಿವು 4 ಲಕ್ಷ ಕ್ಯೂಸೆಕ್ಸ್ ಇದೆ. ಅದೇ ರೀತಿ ನಾರಾಯಣಪುರ ಜಲಾಶಯದ ಗರಿಷ್ಠ ಮಟ್ಟ 492.25 ಮೀಟರ್ ಇದ್ದು, ಇಂದಿನ ಮಟ್ಟ 489.55 ಇದೆ. ಜಲಾಶಯದಲ್ಲಿ ಒಳ ಹರಿವು 3.95 ಲಕ್ಷ ಕ್ಯೂಸೆಕ್ಸ್ ಇದ್ದು, ಹೊರ ಹರಿವು 4.13 ಲಕ್ಷ ಕ್ಯೂಸೆಕ್ಸ್ ಇದೆ.

ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಭೂ ಸೇನೆಗಳು ಜಂಟಿ ಕಾರ್ಯಾಚರಣೆ ನಡೆಸಿ ಈ ನಾಲ್ಕು ಜಿಲ್ಲೆಗಳಲ್ಲಿ 25,794 ಜನರನ್ನು ರಕ್ಷಿಸಲಾಗಿದೆ. ಹೆಚ್ಚುವರಿಯಾಗಿ ಎನ್‌ಡಿಆರ್‌ಎಫ್ ಹಾಗೂ ಸೇನೆಯ ನಾಲ್ಕು ತುಕಡಿಗಳು ರಕ್ಷಣಾ ತಂಡಗಳನ್ನು ನಾಳೆ ಸೇರಿಕೊಳ್ಳಲಿವೆ.

ಎನ್‌ಡಿಆರ್‌ಎಫ್‌ನ ನಾಲ್ಕು ತಂಡಗಳು, ಸೇನೆಯ 10 ತುಕಡಿಗಳು, ಎಸ್‌ಡಿಆರ್‌ಎಫ್‌ನ 2 ತಂಡಗಳು ಹಾಗೂ ವಾಯುಸೇನೆಯ 2 ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬೆಳಗಾವಿಯಲ್ಲಿ ಎರಡು ಜೀವ ಹಾನಿಯಾಗಿರುವುದಾಗಿ ವರದಿಯಾಗಿದೆ. ಬೆಳಗಾವಿಯಲ್ಲಿ ಎರಡು, ಬಾಗಲಕೋಟೆಯಲ್ಲಿ 5 ಜಾನುವಾರುಗಳ ಜೀವ ಹಾನಿಯಾಗಿದೆ.

ಬೆಳಗಾವಿ ಜಿಲ್ಲೆಯ 9, ಬಾಗಲಕೋಟೆ ಜಿಲ್ಲೆಯ 4, ವಿಜಯಪುರ ಜಿಲ್ಲೆಯ 2, ರಾಯಚೂರು ಜಿಲ್ಲೆಯ 3 ಹೀಗೆ ಒಟ್ಟು 18 ತಾಲೂಕುಗಳು ಪ್ರವಾಹದಿಂದ ಭಾದಿತವಾಗಿವೆ. ಪ್ರವಾಹದಿಂದಾಗಿ ಈ ನಾಲ್ಕು ಜಿಲ್ಲೆಗಳ 162 ಗ್ರಾಮಗಳು ಬಾಧಿತವಾಗಿವೆ. 92 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 7784 ಜನರಿಗೆ ಈ ಕೇಂದ್ರಗಳಲ್ಲಿ ಆಶ್ರಯ ಒದಗಿಸಲಾಗಿದೆ.

ಬೆಳಗಾವಿಯಲ್ಲಿ 80590, ಬಾಗಲಕೋಟೆಯಲ್ಲಿ 674, ವಿಜಯಪುರದಲ್ಲಿ 341, ರಾಯಚೂರಿನಲ್ಲಿ 110 ಹೆಕ್ಟೇರ್ ಹೀಗೆ ಒಟ್ಟಾರೆ ನಾಲ್ಕು ಜಿಲ್ಲೆಗಳಲ್ಲಿ 82,207 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 9519 ಪ್ರಾಣಿಗಳನ್ನು ರಕ್ಷಿಸಲಾಗಿದ್ದು, 2010 ಪ್ರಾಣಿಗಳಿಗೆ ಸಂತ್ರಸ್ತ ಕೇಂದ್ರಗಳಲ್ಲಿ ಆಶ್ರಯ ಒದಗಿಸಲಾಗಿದೆ.

ಪ್ರಾಥಮಿಕ ವರದಿಯಂತೆ ಬೆಳಗಾವಿ ಜಿಲ್ಲೆಯಲ್ಲಿ 1048 ಕಿ.ಮೀ.ರಸ್ತೆ, 140 ಸೇತುವೆಗಳು, 6 ಸರಕಾರಿ ಕಟ್ಟಡಗಳು, 22 ನೀರು ಸರಬರಾಜು ಸೌಲಭ್ಯಗಳು, 2571 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಕರಾವಳಿ ಮತ್ತು ಮಲೆನಾಡು ಪರಿಸ್ಥಿತಿ: ಉತ್ತರ ಕನ್ನಡ ಜಿಲ್ಲೆಯಲ್ಲಿ 2, ಶಿವಮೊಗ್ಗದಲ್ಲಿ 1 ಜೀವ ಹಾನಿಯಾಗಿದೆ. ಉತ್ತರ ಕನ್ನಡದ 5, ಶಿವಮೊಗ್ಗದ 1, ಕೊಡಗು ಜಿಲ್ಲೆಯ 1, ಚಿಕ್ಕಮಗಳೂರಿನ 4 ಹಾಗೂ ಹಾಸನ ಜಿಲ್ಲೆಯ 3 ತಾಲೂಕುಗಳು ಪ್ರವಾಹದಿಂದ ಬಾಧಿತವಾಗಿವೆ. ಈ ಜಿಲ್ಲೆಗಳ 75 ಗ್ರಾಮಗಳು ಬಾಧಿತವಾಗಿದ್ದು, ಈವರೆಗೆ 3099 ಜನರನ್ನು ಸ್ಥಳಾಂತರಿಸಲಾಗಿದೆ. 11 ಪ್ರಾಣಿ ಜೀವ ಹಾನಿಯಾಗಿದೆ. 

ಉತ್ತರ ಕನ್ನಡ 44, ಶಿವಮೊಗ್ಗ 2, ಕೊಡಗು 11 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 2100 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66, 275 ಮತ್ತು ರಾಜ್ಯ ಹೆದ್ದಾರಿ 91ರಲ್ಲಿ ಭೂ ಕುಸಿತ ಮತ್ತು ಮರಗಳು ಬಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News