×
Ad

ಸಚಿವ ಸಂಪುಟ ರಚನೆ ಮುಂದೂಡಿಕೆ: ಆಕಾಂಕ್ಷಿಗಳಿಗೆ ಭಾರೀ ನಿರಾಸೆ

Update: 2019-08-07 20:36 IST

ಬೆಂಗಳೂರು, ಆ. 7: ರಾಜ್ಯದಲ್ಲಿ ಭಾರೀ ಮಳೆ, ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದ ಸಚಿವ ಸಂಪುಟ ರಚನೆ ಮುಂದೂಡಿಕೆಯಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಭಾರೀ ನಿರಾಸೆ ಮೂಡಿಸಿದೆ.

ಬಿಜೆಪಿ ವರಿಷ್ಠರು ಸೂಚನೆ ನೀಡಿದ್ದರೆ ಆ.9ರ ಶುಕ್ರವಾರ ಸಚಿವ ಸಂಪುಟ ರಚನೆ ನಡೆಯಬೇಕಿತ್ತು. ಆದರೆ, ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಹಠಾತ್ ನಿಧನ ಹಾಗೂ ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಪುಟ ರಚನೆ ಇನ್ನೂ ಒಂದು ವಾರ ಮುಂದೂಡಿಕೆಯಾದಂತಾಗಿದೆ.

ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರದ ನೆರವಿಗಾಗಿ ಪರಿತಪಿಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬಿಎಸ್‌ವೈ ‘ಒನ್ ಮ್ಯಾನ್ ಶೋ’ ನಡೆಸುತ್ತಿದ್ದಾರೆಂದು ವಿಪಕ್ಷಗಳ ಮುಖಂಡರು ಆರೋಪ ಮಾಡಿದ್ದಾರೆ.

‘ಇನ್ನೂ 3-4 ದಿನಗಳನ್ನು ಬಿಟ್ಟು ಮತ್ತೆ ಹೊಸದಿಲ್ಲಿಗೆ ತೆರಳಲಿದ್ದು, ಸಚಿವ ಸಂಪುಟ ರಚನೆ ಸಂಬಂಧ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಣೆ ನೀಡಿದ್ದು, ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನರ ನೆರವಿಗೆ ಧಾವಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರವಾಹ ಪರಿಸ್ಥಿತಿ ನಾಳೆ ಬೆಳಗಾವಿ ಮತ್ತು ಬಾಗಲಕೋಟೆ ಪ್ರವಾಸ ಕೈಗೊಳ್ಳಲಿರುವ ಸಿಎಂ ಯಡಿಯೂರಪ್ಪ, ಜಮಖಂಡಿ, ಮುದೋಳ ಸೇರಿದಂತೆ ಮತ್ತಿತರ ಕಡೆ ವೈಮಾನಿಕ ಸಮೀಕ್ಷೆ ನಡೆಸಿ ನೆರೆ ಪರಿಸ್ಥಿತಿ ಬಗ್ಗೆ ಖುದ್ದು ಅವಲೋಕನ ಮಾಡಲಿದ್ದಾರೆ ಎಂದು ಗೊತ್ತಾಗಿದೆ.

ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ಪ್ರವಾಹ ಉಂಟಾಗಿದ್ದರಿಂದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವ ಬಿಎಸ್‌ವೈ, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಚರ್ಚಿಸಿ ಕೈಗೊಂಡಿರುವ ಪರಿಹಾರ ಕಾರ್ಯಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ-ಸೂಚನೆ ನೀಡಿದ್ದಾರೆ.

ಜಲಾವೃತ ಪ್ರದೇಶಗಳಿಂದ ತಕ್ಷಣವೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು. ಅಂಗನವಾಡಿ, ಸರಕಾರಿ ಶಾಲೆಗಳು, ಸಮುದಾಯ ಭವನ ಸೇರಿದಂತೆ ಎಲ್ಲಿ ಅಗತ್ಯವಿದೆಯೋ ಅಂತಹ ಕಡೆ ಕೂಡಲೇ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕೆಂದು ನಿರ್ದೇಶನ ನೀಡಿದ್ದಾರೆ.

ಜನರ ನೆರವಿಗೆ ಧಾವಿಸಲು ಸೂಚನೆ: ಕೇಂದ್ರ ಗೃಹ ಸಚಿವರೂ ಆಗಿರುವಸ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಸಂಪುಟ ರಚನೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಪರಿಹಾರ ಕಲ್ಪಿಸಲು ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಹೊಸದಿಲ್ಲಿಯಿಂದ ಬುಧವಾರ ಸಂಜೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇಂದೇ ಬೆಳಗಾವಿಗೆ ತೆರಳಲಿದ್ದು, ವೈಮಾನಿಕ ಸಮೀಕ್ಷೆ ನಡೆಸಲಿದ್ದೇನೆ. ಅಲ್ಲದೆ ಅಧಿಕಾರಿಗಳ ಜತೆ ಸಭೆ ನಡೆಸಿ ಪರಿಸ್ಥಿತಿ ನಿಭಾಯಿಸಲು ಸೂಚನೆ ನೀಡಲಿದ್ದೇನೆ ಎಂದರು.

ಆ.10 ಅಥವಾ 11ಕ್ಕೆ ನಾನು ಮತ್ತೆ ದಿಲ್ಲಿಗೆ ತೆರಳಲಿದ್ದು, ಸಚಿವ ಸಂಪುಟ ರಚನೆ ಬಗ್ಗೆ ವರಿಷ್ಠರ ಜತೆ ಚರ್ಚಿಸಿ ಸಂಪುಟ ರಚನೆಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದ ಯಡಿಯೂರಪ್ಪ, ಕೇಂದ್ರ ಸಚಿವ ಸುರೇಶ್ ಅಂಗಡಿ ಸೇರಿ ಎಲ್ಲ ಶಾಸಕರು, ಸಂಸದರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇರಲಿದ್ದಾರೆ ಎಂದು ಹೇಳಿದರು.

ಮೂಲಗಳ ಪ್ರಕಾರ ಆ.11ಕ್ಕೆ ಬಿಎಸ್‌ವೈ ದಿಲ್ಲಿಗೆ ತೆರಳುವ ಸಾಧ್ಯತೆಗಳಿದ್ದು, ಸಚಿವ ಸಂಪುಟ ರಚನೆ ಸಂಬಂಧ ಬಿಜೆಪಿ ವರಿಷ್ಠರ ಜತೆ ಚರ್ಚಿಸಲಿದ್ದಾರೆ. ಅವರು ಒಪ್ಪಿಗೆ ನೀಡಿದರೆ ಆ.13 ಅಥವಾ 14ಕ್ಕೆ ಸಚಿವ ಸಂಪುಟ ರಚನೆಯಾಗುವ ನಿರೀಕ್ಷೆ ಇದ್ದು, ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News