ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ

Update: 2019-08-07 16:28 GMT

ಮೈಸೂರು,ಆ.7: ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚಿಸಿರುವ ಹಿನ್ನಲೆಯಲ್ಲಿ ರಾಮದಾಸ್ ಅವರ ಸಚಿವರಾಗುವ ಕನಸು ಭಗ್ನಗೊಂಡಿದೆ.

25 ವರ್ಷಗಳ ಹಳೆಯ ಭೂ ಅಕ್ರಮಕ್ಕೆ ಮರು ಜೀವ ಬಂದಿದ್ದು, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಿ ರಿಪೋರ್ಟ್ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

1995 ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದಾಗ ಎಸ್.ಎ.ರಾಮದಾಸ್ ಮಳಲವಾಡಿಯಲ್ಲಿ ಭೂ ಹಗರಣ ಮಾಡಿದ್ದರು ಎಂದು ದೂರು ದಾಖಲಾಗಿತ್ತು.  ಇಲ್ಲಿನ ನೂರಾರು ಎಕರೆ ಭೂಮಿಯನ್ನು ಪರಿವರ್ತಿಸಿ ನಿವೇಶನ ಮಾಡಿ ಮಾರಾಟ ಮಾಡಿದ್ದಾರೆ ಎಂದು ಅಂದಿನ ಜಿಲ್ಲಾಧಿಕಾರಿಯಾಗಿದ್ದ ತ.ಮ.ವಿಜಯಭಾಸ್ಕರ್ ನೀಡಿದ್ದ ವರದಿ ಮೇಲೆ ಎಫ್.ಐ.ಆರ್ ದಾಖಲಾಗಿತ್ತು.

ಶಾಸಕ ಎಸ್.ಎ.ರಾಮದಾಸ್ ಸಚಿವರಾದ ನಂತರ ತಮ್ಮ ಪ್ರಭಾವ ಬಳಸಿ ಬಿ ರಿಪೋರ್ಟ್ ಮಾಡಿಸಿದ್ದರು ಎನ್ನಲಾಗಿದ್ದು, ಬಿ ರಿಪೋರ್ಟ್ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ.6 ರಂದು ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.

ಸೆ.3 ಕ್ಕೆ ಶಾಸಕ ಎಸ್.ಎ.ರಾಮದಾಸ್ ಖುದ್ದು ಹಾಜರಾಗುವಂತೆ ಕೋರ್ಟ್ ಆದೇಶ ನೀಡಿದೆ. ಈ ಹಿನ್ನಲೆಯಲ್ಲಿ ಸಚಿವರಾಗಬೇಕು ಎಂಬ ಕನಸು ಕಂಡಿದ್ದ ರಾಮದಾಸ್ ಅವರಿಗೆ ಹಿನ್ನಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News