106 ಗ್ರಾಮಗಳು ಜಲಾವೃತ, ರಕ್ಷಣಾ ಕಾರ್ಯಕ್ಕೆ ಹೆಚ್ಚುವರಿ ಸೇನೆ ನಿಯೋಜನೆ: ಸಿಎಂ ಯಡಿಯೂರಪ್ಪ

Update: 2019-08-07 16:38 GMT

ಬೆಳಗಾವಿ, ಆ.7: ಬೆಳಗಾವಿ ಜಿಲ್ಲೆಯಲ್ಲಿ 106 ಗ್ರಾಮಗಳು ಜಲಾವೃತಗೊಂಡಿದ್ದು, ಜನ-ಜಾನುವಾರುಗಳ ರಕ್ಷಣೆಗೆ ಸರಕಾರ ಆದ್ಯತೆ ನೀಡಲಿದೆ. ಗುರುವಾರ ಹೆಚ್ಚುವರಿ ಸೇನೆಯ ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಬುಧವಾರ ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೆಚ್ಚುವರಿ ಸೇನೆ ಹಾಗೂ ಹೆಲಿಕಾಪ್ಟರ್ ಕೇಂದ್ರಕ್ಕೆ ಮನವಿ ಕಳಿಸಲಾಗುವುದು. ನಿರಾಶ್ರಿತರಿಗೆ ಆಹಾರ, ಬಟ್ಟೆ, ವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು. ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. ಇದು ದುರದೃಷ್ಟಕರ ಸಂಗತಿ. ಪ್ರವಾಹ ನಿರ್ವಹಣೆಗೆ ಸರಕಾರ ಸನ್ನದ್ಧವಾಗಿದೆ. ಪ್ರವಾಹದಿಂದ ಮರಣ ಹೊಂದಿರುವ ವ್ಯಕ್ತಿಯ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.

ಪಿಎಸ್‌ಐ ಕುಟುಂಬಕ್ಕೆ 50 ಲಕ್ಷ ಪರಿಹಾರ: ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ರಸ್ತೆ ಸಂಚಾರ ನಿಯಂತ್ರಣ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ಪಿಎಸ್‌ಐ ಕುಟುಂಬಕ್ಕೆ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಇಲಾಖೆಯಿಂದ 30 ಲಕ್ಷ ಮತ್ತು ವಿಪತ್ತು ಪರಿಹಾರ ನಿಧಿಯಿಂದ 20 ಲಕ್ಷ ಸೇರಿದಂತೆ ಒಟ್ಟು 50 ಲಕ್ಷ ಪರಿಹಾರ ನೀಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ಒದಗಿಸಲಾಗುವುದು.

ಇದು ನಲವತ್ತು ವರ್ಷಗಳಲ್ಲಿ ಎಂದೂ ಕಾಣದ ಪ್ರವಾಹ. ಜನರು ಸಂಕಷ್ಟದಲ್ಲಿದ್ದಾರೆ. ಮಹಾರಾಷ್ಟ್ರದಿಂದ ಭಾರೀ ಪ್ರಮಾಣದ ನೀರು ಹಾಗೂ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದೆ ಎಂದರು.

ಜನ-ಜಾನುವಾರು ರಕ್ಷಣೆ ಮೊದಲ ಆದ್ಯತೆ: 106 ಗ್ರಾಮಗಳು ಜಲಾವೃತಗೊಂಡಿವೆ. 22682 ಜನರ ಸ್ಥಳಾಂತರ ಮಾಡಲಾಗಿದೆ. ಸಂತ್ರಸ್ತರ ನೆರವಿಗೆ ಆಗಮಿಸುವ ಸ್ವಯಂ ಸೇವಾಸಂಘಗಳಿಗೆ ಮುಕ್ತ ಅವಕಾಶ. ಎಂಟು ಸೇನಾ ತುಕಡಿ, 5 ಎನ್‌ಡಿ.ಆರ್.ಎಫ್. 2 ಎಸ್‌ಡಿ.ಆರ್.ಎಫ್. ನಿಯೋಜನೆ ಮಾಡಲಾಗಿದೆ. ಗುರುವಾರ ನಾಲ್ಕು ಎನ್.ಡಿ.ಆರ್.ಎಫ್. ಹಾಗೂ ಸೇನಾ ತುಕಡಿಗಳ ಆಗಮಿಸಲಿವೆ. ಅಧಿಕಾರಿಗಳು ದೃತಿಗೆಡದೇ ರಕ್ಷಣಾ ಕಾರ್ಯದಲ್ಲಿ ತೊಡಗಲಿ. ಸರಕಾರದಿಂದ ಎಲ್ಲ ರೀತಿಯ ಸಹಾಯ ಒದಗಿಸಲಾಗುವುದು.

ಚಿಕ್ಕೋಡಿ, ಹುಕ್ಕೇರಿ, ಗೋಕಾಕ್, ಅಥಣಿ, ರಾಯಬಾಗ ತಾಲೂಕುಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಸಮರ್ಪಕ ರಕ್ಷಣಾ ಕೇಂದ್ರಗಳ ಸ್ಥಾಪನೆಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಐದು ನದಿಗಳ ನೀರು ಸೇರಿದಂತೆ 5 ಲಕ್ಷ ಕ್ಯೂಸೆಕ್ ನೀರು ಕಷ್ಣೆಯ ಮೂಲಕ ಹರಿಸಲಾಗುತ್ತಿದೆ ಎಂದರು.

ಮೂರು ದಿನ ಮೊಕ್ಕಾಂ: ಗುರುವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ, ಪ್ರವಾಹ ಬಾಧಿತ ಸ್ಥಳಗಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಚಿಕ್ಕೋಡಿಯಲ್ಲಿ ಪ್ರವಾಹ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಸಲಹೆಗಳನ್ನು ನೀಡಲಾಗುವುದು.

ಎರಡು ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚಾರ ಮಾಡುತ್ತೇನೆ. ಅಗತ್ಯ ಬಿದ್ದರೆ ಇನ್ನೊಂದು ದಿನ ಇಲ್ಲಿಯೇ ವಾಸ್ತವ್ಯ ಮಾಡುತ್ತೇನೆ ಎಂದರು. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಜಿಲ್ಲಾಡಳಿತ ಎಲ್ಲ ರೀತಿಯ ಪ್ರಯತ್ನ ನಡೆಸಿದೆ. ಇದಕ್ಕಾಗಿ ಹೆಲಿಕಾಪ್ಟರ್ ನಿಯೋಜನೆ ಮಾಡಲಾಗುವುದು.

ಎರಡು ಬಾರಿ ಹೆಲಿಕಾಪ್ಟರ್ ಸಂಚಾರ ಸಾಧ್ಯವಾಗಿಲ್ಲ. ಹೆಲಿಕಾಪ್ಟರ್ ತುಮಕೂರಿನಿಂದ ಹಿಂದಿರುಗಿವೆ. ಆದಾಗ್ಯೂ ದಂಪತಿ ರಕ್ಷಣೆಗೆ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News