ಧಾರವಾಡ: ನಿರಾಶ್ರಿತರಿಗೆ ಮೂರು ಪರಿಹಾರ ಕೇಂದ್ರಗಳ ಸ್ಥಾಪನೆ

Update: 2019-08-07 16:53 GMT

ಧಾರವಾಡ, ಆ.7: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೆರೆ, ಕಟ್ಟೆ ಮತ್ತು ನಾಲಾಗಳ ಪ್ರವಾಹದ ಮಟ್ಟ ಏರುತ್ತಿದೆ. ಆದುದರಿಂದ, ಬಾಧಿತ ಜನರನ್ನು ಜಿಲ್ಲಾಡಳಿತವು ಆ.6ರಂದು ವಿವಿಧ ಸ್ಥಳಗಳಲ್ಲಿ ಮೂರು ಪರಿಹಾರ ಕೇಂದ್ರಗಳನ್ನು ಆರಂಭಿಸಿ, ಅಲ್ಲಿಗೆ ಸ್ಥಳಾಂತರಿಸಿದೆ. 

ಧಾರವಾಡ ನಗರದ ಸಪ್ತಾಪೂರ ಬಳಿ ಭಾಕಟ್ಟಿ ಪ್ಲಾಟ್‌ನ ಚನ್ನಬಸವೇಶ್ವರ ಪ್ರೌಢಶಾಲೆಯಲ್ಲಿ ಪರಿಹಾರ ಕೇಂದ್ರವನ್ನು ಸ್ಥಾಪಿಸಿದ್ದು, ಇಲ್ಲಿ 250 ರಿಂದ 300 ಜನರಿಗೆ ಆಹಾರ ಪೂರೈಸಲಾಗುತ್ತಿದೆ. ಶ್ರೀನಗರದ ಪರಿಸರ ಭವನ ಹಾಗೂ ಶಿವಾಲಯದಲ್ಲಿ ನಿರಾಶ್ರಿತರಿಗೆ ವಸತಿ ಕಲ್ಪಿಸಲಾಗಿದೆ. ಅಳ್ನಾವರ ಪಟ್ಟಣದ ಉಮಾ ಭವನದಲ್ಲಿ ಪರಿಹಾರ ಕೇಂದ್ರವನ್ನು ಸ್ಥಾಪಿಸಿದ್ದು, ಇಲ್ಲಿ ಒಟ್ಟು 100 ಕುಟುಂಬಗಳ ಸುಮಾರು 300 ಜನರಿಗೆ ಊಟ ವಸತಿ ಕಲ್ಪಿಸಲಾಗಿದೆ.

ನವಲಗುಂದ ತಾಲೂಕಿನ ಆರೇಕುರಹಟ್ಟಿ ಗ್ರಾಮದಲ್ಲಿ ಪರಿಹಾರ ಕೇಂದ್ರವನ್ನು ಸ್ಥಾಪಿಸಿದ್ದು, ಇಲ್ಲಿ 60 ಕುಟುಂಬಗಳನ್ನು ರಕ್ಷಿಸಿ, 120 ಜನರನ್ನು ಸ್ಥಳಾಂತರಿಸಲಾಗಿದೆ. ಅದಮ್ಯ ಚೇತನ ಸಂಸ್ಥೆಯ ಸಹಯೋಗದಲ್ಲಿ ಆಹಾರ ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಮೂರು ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದ್ದು, 435 ಕುಟುಂಬಗಳನ್ನು ರಕ್ಷಿಸಿ, 821 ಜನರನ್ನು ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News