ಯುವತಿಯ ಹೆಸರಿನಲ್ಲಿ ಅಶ್ಲೀಲ ಸಂದೇಶ, ಫೋಟೋ ಅಪ್ಲೋಡ್: ಆರೋಪಿಯ ಬಂಧನ
ಶಿವಮೊಗ್ಗ, ಆ.7: ಯುವತಿಯೋರ್ವಳ ಹೆಸರಿನಲ್ಲಿ ನಕಲಿ ಇನ್‍ಸ್ಟ್ರಾಗ್ರಾಂ ಹಾಗೂ ಫೇಸ್‍ಬುಕ್ ಮೆಸೆಂಜರ್ ಖಾತೆಗಳನ್ನು ಸೃಷ್ಟಿಸಿ, ಅಶ್ಲೀಲ ಸಂದೇಶ ಹಾಗೂ ಫೋಟೋ ಹಾಕುತ್ತಿದ್ದ ಆರೋಪಿಯನ್ನು ಶಿವಮೊಗ್ಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಸಚಿನ್ (24) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಭದ್ರಾವತಿ ಪಟ್ಟಣದ ಜಿಂಕ್‍ಲೈನ್ ನಿವಾಸಿಯಾಗಿದ್ದಾನೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಇತ್ತೀಚೆಗೆ ವ್ಯಕ್ತಿಯೋರ್ವರು ಸಿಇಎನ್ ಠಾಣೆಗೆ ದೂರು ನೀಡಿ, ಅನಾಮಧೇಯ ವ್ಯಕ್ತಿಯೋರ್ವ ತಮ್ಮ ಪುತ್ರಿಯ ಹೆಸರಿನಲ್ಲಿ ಇನ್‍ಸ್ಟ್ರಾಗ್ರಾಂ ಹಾಗೂ ಫೇಸ್‍ಬುಕ್ ಮೆಸೆಂಜರ್ ಖಾತೆಗಳನ್ನು ಸೃಷ್ಟಿಸಿ ಸಂಬಂಧಿಕರು ಹಾಗೂ ಪುತ್ರಿಯ ಸ್ನೇಹಿತರಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದಾನೆ. ಈತನನ್ನು ಪತ್ತೆ ಹಚ್ಚುವಂತೆ ಕೋರಿ ದೂರು ನೀಡಿದ್ದರು. ಈ ಕುರಿತಂತೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು.
ಪ್ರಕರಣದ ತನಿಖೆಗಾಗಿ ಜಿಲ್ಲಾ ರಕ್ಷಣಾಧಿಕಾರಿಗಳು ಸಿಇಎನ್ ಠಾಣೆ ಇನ್ಸ್‍ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಕ್ಷಿಪ್ರ ತನಿಖೆ ನಡೆಸಿದ ಈ ತಂಡವು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ವಿಚಾರಣೆಯ ವೇಳೆ ಆರೋಪಿಯು ನಕಲಿ ಐಡಿ ಸೃಷ್ಟಿಸಿದ್ದನ್ನು ಒಪ್ಪಿಕೊಂಡಿದ್ದ.
ಸದರಿ ಯುವತಿಯು ಆರೋಪಿಗೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದು, ಆರೋಪಿಯು ಪ್ರೀತಿಸುವಂತೆ ಕೋರಿಕೊಂಡಿದ್ದ. ಆದರೆ ಯುವತಿಯು ಪ್ರೀತಿಸಲು ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿಯು ಯುವತಿಯ ಹೆಸರಿಗೆ ಕಳಂಕ ತರಲು ನಕಲಿ ಖಾತೆಗಳನ್ನು ಸೃಷ್ಟಿಸಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.