ಭಾರತಕ್ಕೆ ಸಂಝೋತಾ ಎಕ್ಸ್ ಪ್ರೆಸ್ ರೈಲು ಸೇವೆ ರದ್ದುಗೊಳಿಸಿದ ಪಾಕ್

Update: 2019-08-08 13:29 GMT

ಹೊಸದಿಲ್ಲಿ, ಆ.8: ಜಮ್ಮು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿರುವುದನ್ನು ವಿರೋಧಿಸಿ ಸರಣಿ ಕ್ರಮಗಳನ್ನು ಕೈಗೊಂಡಿರುವ ಪಾಕಿಸ್ತಾನ ಇದೀಗ ಸಂಝೋತಾ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಅಮಾನತುಗೊಳಿಸಿದೆ.

ಉಭಯ ದೇಶಗಳ ನಡುವಿನ ರೈಲು ಸೇವೆಯನ್ನು ಪಾಕಿಸ್ತಾನ ಏಕಾಏಕಿ ಅಮಾನತುಗೊಳಿಸಿದ್ದು, ಈ ಕುರಿತು ಭಾರತ ಸರಕಾರಕ್ಕೆ ಮಾಹಿತಿ ನೀಡಿರಲಿಲ್ಲ. ಇದರಿಂದ ಅಟ್ಟಾರಿ ಗಡಿಭಾಗದಲ್ಲಿ ಹಲವಾರು ಪ್ರಯಾಣಿಕರು ಅತಂತ್ರ ಸ್ಥಿತಿಯಲ್ಲಿ ಸಿಲುಕುವಂತಾಯಿತು. ಗುರುವಾರ ಸಂಝೋತಾ ಎಕ್ಸ್‌ಪ್ರೆಸ್ ರೈಲು ಪಾಕಿಸ್ತಾನದಿಂದ ಅಟ್ಟಾರಿ ಅಂತರಾಷ್ಟ್ರೀಯ ರೈಲ್ವೇ ನಿಲ್ದಾಣಕ್ಕೆ ಆಗಮಿಸಬೇಕಿತ್ತು. ಆದರೆ ಬರಲಿಲ್ಲ ಎಂದು ಅಟ್ಟಾರಿ ರೈಲು ನಿಲ್ದಾಣದ ಅಧೀಕ್ಷಕ ಅರವಿಂದ್ ಕುಮಾರ್ ಹೇಳಿದ್ದಾರೆ. ಇದೀಗ ರೈಲನ್ನು ಪಾಕಿಸ್ತಾನದಿಂದ ತರಲು ಪ್ರವಾಸಿ ವೀಸಾ ಹೊಂದಿರುವ ಚಾಲಕ ಹಾಗೂ ಸಿಬಂದಿಗಳನ್ನು ಅಲ್ಲಿಗೆ ಕಳಿಸಲಾಗುವುದು ಎಂದು ಕುಮಾರ್ ಹೇಳಿದ್ದಾರೆ. ಅಟ್ಟಾರಿ ನಿಲ್ದಾಣದವರೆಗೆ ಈ ರೈಲನ್ನು ಪಾಕಿಸ್ತಾನದ ಚಾಲಕ ಹಾಗೂ ಗಾರ್ಡ್‌ಗಳು ನಿರ್ವಹಿಸುತ್ತಾರೆ.

ಆದರೆ ಗುರುವಾರ ಪಾಕಿಸ್ತಾನ ತನ್ನ ಚಾಲಕ ಹಾಗೂ ಗಾರ್ಡ್ ಅನ್ನು ಕಳಿಸದ ಕಾರಣ ರೈಲು ಅಟ್ಟಾರಿಗೆ ಬರಲಿಲ್ಲ. ಭದ್ರತೆಯ ಕಾರಣಕ್ಕಾಗಿ ಹೀಗೆ ಮಾಡಿರುವುದಾಗಿ ಪಾಕಿಸ್ತಾನ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News