ಜಮ್ಮು-ಕಾಶ್ಮೀರದ ನೂತನ ಭೌಗೋಳಿಕ ಸ್ಥಾನಮಾನದ ಮೇಲೆ ನಿಕಟ ನಿಗಾ: ಅಮೆರಿಕ ಪುನರುಚ್ಚಾರ

Update: 2019-08-08 15:52 GMT

ವಾಶಿಂಗ್ಟನ್, ಆ. 8: ಜಮ್ಮು ಮತ್ತು ಕಾಶ್ಮೀರದ ನೂತನ ಭೌಗೋಳಿಕ ಸ್ಥಾನಮಾನ ಮತ್ತು ಆಡಳಿತಕ್ಕೆ ಸಂಬಂಧಿಸಿದ ಭಾರತದ ಶಾಸನವನ್ನು ಅಮೆರಿಕ ನಿಕಟವಾಗಿ ಗಮನಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಬುಧವಾರ ಪುನರುಚ್ಚರಿಸಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ನಿರ್ಣಯ ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮಸೂದೆಗೆ ಭಾರತೀಯ ಸಂಸತ್ತು ಮಂಗಳವಾರ ಅಂಗೀಕಾರ ನೀಡಿದ ಬಳಿಕ ಅಮೆರಿಕ ಈ ಪ್ರತಿಕ್ರಿಯೆ ನೀಡಿದೆ.

 ‘‘ಜಮ್ಮು ಮತ್ತು ಕಾಶ್ಮೀರದ ನೂತನ ಭೌಗೋಳಿಕ ಸ್ಥಾನಮಾನ ಮತ್ತು ಆಡಳಿತಕ್ಕೆ ಸಂಬಂಧಿಸಿದ ಭಾರತದ ಶಾಸನವನ್ನು ಅಮೆರಿಕ ನಿಕಟವಾಗಿ ಗಮನಿಸುತ್ತಿದೆ. ಭಾರತದ ಈ ಕ್ರಮದಿಂದಾಗಿ ವಲಯದಲ್ಲಿನ ಅಸ್ಥಿರತೆ ಹೆಚ್ಚುವ ಸಾಧ್ಯತೆ ಸೇರಿದಂತೆ ಅದರ ವಿಸ್ತೃತ ಪರಿಣಾಮಗಳನ್ನೂ ನಾವು ಗಣನೆಗೆ ತೆಗೆದುಕೊಂಡಿದ್ದೇವೆ’’ ಎಂದು ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ಪಿಟಿಐಗೆ ತಿಳಿಸಿದರು.

 ಪಾಕಿಸ್ತಾನವು ಬುಧವಾರ ಭಾರತೀಯ ಹೈಕಮಿಶನರ್ ಅಜಯ್ ಬಿಸಾರಿಯರನ್ನು ಉಚ್ಚಾಟಿಸಿ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೆಳ ದರ್ಜೆಗೆ ಇಳಿಸಿದ ನಂತರ ಉದ್ಭವಿಸಿದ ಪರಿಸ್ಥಿತಿಯ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

ಉದ್ವಿಗ್ನತೆಯನ್ನು ತಣಿಸಲು ಹಾಗೂ ದಕ್ಷಿಣ ಏಶ್ಯದಲ್ಲಿ ಸಂಭಾವ್ಯ ಸೇನಾ ಸಂಘರ್ಷವನ್ನು ತಪ್ಪಿಸಲು ಸಂಬಂಧಪಟ್ಟ ಎಲ್ಲ ಪಕ್ಷಗಳ ನಡುವೆ ಮಾತುಕತೆ ನಡೆಯುವ ‘ತುರ್ತು ಅಗತ್ಯ’ವಿದೆ ಎಂಬುದಾಗಿಯೂ ಅಮೆರಿಕ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News