‘ಬಿಳಿ ಭಯೋತ್ಪಾದನೆ’ಯೂ, ಪಾಶ್ಚಾತ್ಯರ ಮೌನವೂ!

Update: 2019-08-09 05:12 GMT

ದೀಪದ ಬುಡ ಕತ್ತಲೆ ಎನ್ನುವ ಮಾತಿದೆ. ಜಗತ್ತಿನ ಭಯೋತ್ಪಾದನೆಗಳನ್ನು ನಿವಾರಿಸಲು ಹೊರಟಿರುವ ಅಮೆರಿಕ, ಇದೀಗ ತನ್ನದೇ ನೆಲದಲ್ಲಿ ಬೇರಿಳಿಯುತ್ತಿರುವ ವರ್ಣ ಭಯೋತ್ಪಾದನೆಗೆ ಬೆಲೆ ತೆರುತ್ತಿದೆ ಮತ್ತು ಇವನ್ನು ಬರೇ ಅಪರಾಧ ಪ್ರಕರಣಗಳೆಂಬಂತೆ ಮಾಧ್ಯಮಗಳು ವ್ಯಾಖ್ಯಾನಿಸುತ್ತಿವೆ. ಕಳೆದ ವಾರಾಂತ್ಯದಲ್ಲಿ ಅಮೆರಿಕದ ಎಲ್‌ಪಾಸ್ಸೊ ಹಾಗೂ ಡೇಟನ್ ನಗರಗಳಲ್ಲಿ 24 ತಾಸುಗಳ ಅವಧಿಯೊಳಗೆ ನಡೆದ ಎರಡು ಶೂಟೌಟ್ ಘಟನೆಗಳಲ್ಲಿ 29 ಮಂದಿ ಮೃತಪಟ್ಟಿದ್ದಾರೆ. ಅಂಕಿಅಂಶವೊಂದರ ಪ್ರಕಾರ 2019ರಲ್ಲಿ ಕೇವಲ 216 ದಿನಗಳ ಅವಧಿಯಲ್ಲಿ 251 ಶೂಟೌಟ್ ಘಟನೆಗಳು ನಡೆದಿವೆ. ಬಹುಶಃ ಈ ಘಟನೆಗಳಲ್ಲಿ ಒಂದು ಮುಸ್ಲಿಮ್ ಸಂಘಟನೆ ಅಥವಾ ಒಬ್ಬ ಮುಸ್ಲಿಮ್ ಗಡ್ಡಧಾರಿಯ ಪಾತ್ರವಿದ್ದಿದ್ದರೆ ಇದು ಪಡೆಯುತ್ತಿದ್ದ ರೂಪವೇ ಬೇರೆಯಾಗಿ ಬಿಡುತ್ತಿತ್ತು. ಧಾರ್ಮಿಕ ಮುಸ್ಲಿಮರು ಈ ಘಟನೆಗಳಿಗೂ ತಮಗೂ ಸಂಬಂಧವಿಲ್ಲ ಎನ್ನುವುದನ್ನು ಸಾಬೀತು ಪಡಿಸಲು ಹೆಣಗಾಡಬೇಕಾಗಿತ್ತು. ‘ಇಸ್ಲಾಮಿಗೂ ಹಿಂಸೆಗೂ ಯಾವ ಸಂಬಂಧವೂ ಇಲ್ಲ’ ಎನ್ನುವುದನ್ನು ನಿರೂಪಿಸುವ ಬಹುದೊಡ್ಡ ಹೊಣೆಗಾರಿಕೆ ಅವರ ಮೇಲೆ ಬೀಳುತ್ತಿತ್ತು. ಮುಸ್ಲಿಮರ ಪ್ರಾರ್ಥನಾ ಸ್ಥಳಗಳ ಮೇಲೆ ತೀವ್ರ ಕಣ್ಗಾವಲನ್ನಿಡಲಾಗುತ್ತಿತ್ತು. ಉಗ್ರರ ದಮನಕ್ಕೆ ಸಮರ್ಪಕವಾಗಿ ಸಹಕರಿಸುತ್ತಿಲ್ಲವೆಂಬ ಕಾರಣ ಹೇಳಿ, ಹಲವು ರಾಷ್ಟ್ರಗಳ ವಿರುದ್ಧ ದಿಗ್ಬಂಧನ ಹೇರುವ ಸಾಧ್ಯತೆಯಿತ್ತು. ರಾಜಕಾರಣಿಗಳು ಇನ್ನೂ ಒಂದು ಹೆಜ್ಜೆ ಹೊಂದಿ ಮುಸ್ಲಿಮರು ಅಮೆರಿಕದೊಳಗೆ ಕಾಲಿಡದಂತೆ ಅವರಿಗೆ ಸಂಪೂರ್ಣ ನಿಷೇಧ ವಿಧಿಸಬೇಕೆಂದು ಅಗ್ರಹಿಸುತ್ತಿದ್ದರು.

 ಸದ್ಯಕ್ಕೆ ಅಮೆರಿಕದಲ್ಲಿ ಇಷ್ಟೆಲ್ಲ ಹಿಂಸಾಚಾರ ನಡೆದ ಬಳಿಕವೂ ಅದನ್ನು ಭಯೋತ್ಪಾದನೆ ಎಂದಾಗಲಿ, ಜನಾಂಗೀಯ ಹಿಂಸಾಚಾರವೆಂದಾಗಲಿ ಗುರುತಿಸಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ನಿಧಾನಕ್ಕೆ ಪಾಶ್ಚಾತ್ಯ ದೇಶಗಳಲ್ಲಿ ಬಿಳಿ ಬಣ್ಣದ ತಳಹದಿಯ ಮೇಲೆ ತಲೆಯೆತ್ತುತ್ತಿರುವ ಜನಾಂಗೀಯ ದ್ವೇಷವನ್ನು ಚರ್ಚೆಯ ವಸ್ತುವಾಗದಂತೆ ನೋಡಿಕೊಳ್ಳುವಲ್ಲಿ ಮಾಧ್ಯಮಗಳು ಬಹುತೇಕ ಯಶಸ್ವಿಯಾಗಿವೆ. ವಿಶ್ವದ ರಾಜಕೀಯ ನಾಯಕರಿಗೂ ಇದು ಬೇಕಾಗಿಲ್ಲ. ಇದನ್ನು ತಡೆಯಲು ಗಂಭೀರ ಕ್ರಮವನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎನ್ನುವುದು ಜಗತ್ತಿನ ಶಾಂತಿ ಬೋಧಕರಿಗೆ ಅನ್ನಿಸುತ್ತಿಲ್ಲ. ಬಿಳಿಯ ಜನಾಂಗೀಯವಾದಿ ಭಯೋತ್ಪಾದಕ ದಾಳಿಗಳನ್ನು ನಡೆಸಿದವರು ಸ್ಥಳೀಯರೇ ಆಗಿರಬಹುದು. ಆದರೆ ಅವರು ಪ್ರತಿಪಾದಿಸುತ್ತಿರುವ ಸಿದ್ಧಾಂತವು ಜಾಗತಿಕ ಮಟ್ಟದಲ್ಲಿ ಹರಡಿದೆ. ಟೆಕ್ಸಾಸ್‌ನ ಎಲ್‌ಪಾಸೊ ನಗರದ ವಾಲ್‌ಮಾರ್ಟ್ ಮಳಿಗೆಯಲ್ಲಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕನು ಇಡೀ ಟೆಕ್ಸಾಸ್ ರಾಜ್ಯವನ್ನು ಹಿಸ್ಪಾನಿಕ್ ಜನಾಂಗದ ವಲಸಿಗರು ಅತಿಕ್ರಮಿಸುವರೆಂಬ ಭೀತಿಗೊಳಗಾಗಿದ್ದನೆಂದು ಅಮೆರಿಕದ ಫೆಡರಲ್ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದರು. ಮಾರ್ಚ್ 15ರಂದು ನ್ಯೂಝಿಲ್ಯಾಂಡ್‌ನ ಮಸೀದಿಗಳಲ್ಲಿ ಶೂಟೌಟ್ ನಡೆಸಿದ ಬಿಳಿಯಜನಾಂಗೀಯವಾದಿ ಉಗ್ರನೊಬ್ಬ ತಾನು ನಾರ್ವೆ, ಅಮೆರಿಕ, ಇಟಲಿ, ಸ್ವೀಡನ್ ಹಾಗೂ ಬ್ರಿಟನ್‌ನಲ್ಲಿ ಬಿಳಿಯಜನಾಂಗೀಯ ಶ್ರೇಷ್ಠತಾವಾದಿಗಳು ನಡೆಸಿದ ದಾಳಿಗಳಿಂದ ಸ್ಫೂರ್ತಿ ಪಡೆದಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ. ನ್ಯೂಝಿಲ್ಯಾಂಡ್ ಘಟನೆಯಲ್ಲಿ ಸಂತ್ರಸ್ತ ಮುಸ್ಲಿಮರನ್ನು ಸಮಾಧಾನಿಸುವ ಪ್ರಯತ್ನ ನಡೆಯಿತೇ ಹೊರತು, ಅಷ್ಟೇ ಗಂಭೀರವಾಗಿ ಇಂತಹ ಜನಾಂಗೀಯ ಮನಸ್ಥಿತಿಗಳನ್ನು ನಿವಾರಿಸುವ ವ್ಯಾಪಕ ಕ್ರಮವೊಂದನ್ನು ಕೈಗೊಳ್ಳಲು ಪಾಶ್ಚಾತ್ಯ ದೇಶಗಳು ಪರಸ್ಪರ ಕೈಜೋಡಿಸುವ ಅಗತ್ಯವಿದೆ ಎಂದು ಯಾರಿಗೂ ಅನ್ನಿಸಲಿಲ್ಲ. ಅಮೆರಿಕದ ಟೈಮ್ಸ್ ಪತ್ರಿಕೆಯು ಈ ವರ್ಷದ ಆರಂಭದಲ್ಲಿ ಪ್ರಕಟಿಸಿದ ತನಿಖಾ ವರದಿಯೊಂದು, 2011ರಿಂದೀಚೆಗೆ ನಡೆದ ದಾಳಿಗಳಲ್ಲಿ, ಕನಿಷ್ಠ ಪಕ್ಷ ಪ್ರತಿ ಮೂವರು ಬಿಳಿಯ ಜನಾಂಗೀಯವಾದಿ ಉಗ್ರರು ಇದೇ ರೀತಿಯ ಬಿಳಿಯ ಜನಾಂಗೀಯವಾದಿಗಳು ನಡೆಸಿದ ಭಯೋತ್ಪಾದಕ ದಾಳಿಗಳಿಂದ ಪ್ರೇರಣೆ ಪಡೆದವನಾಗಿದ್ದನೆಂಬುದನ್ನು ಬಹಿರಂಗಪಡಿಸಿತ್ತು.ಬಿಳಿಯ ಜನಾಂಗೀಯವಾದಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸಿದ್ಧಾಂತಗಳನ್ನು ಹರಡುತ್ತಿದ್ದಾರೆ. ಈ ಚಿಂತನೆಗಳಿಗೆ ನಿಷ್ಠರಾದವರು ಅನಾಮಿಕ ಆನ್‌ಲೈನ್ ವೇದಿಕೆಗಳ ಮೂಲಕ, ಇತರ ಜನಾಂಗೀಯರ ವಿರುದ್ಧ ದಾಳಿಗಳನ್ನು ನಡೆಸುವ ಬಗ್ಗೆ ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಹುರಿದುಂಬಿಸುವ ಕುರಿತಾಗಿ ತಮ್ಮ ಚಿಂತನೆಗಳನ್ನು ಹರಡಲು ಈ ಆನ್‌ಲೈನ್ ವೇದಿಕೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆನ್‌ಲೈನ್ ತಾಣಗಳಾದ 4ಚಾನ್ ಹಾಗೂ 8ಚಾನ್, ಬಿಳಿಯ ರಾಷ್ಟ್ರೀಯವಾದಿ ತೀವ್ರವಾದಿ ಚಟುವಟಿಕೆಗಳ ಆಡಂಬೊಲವಾಗಿದೆ. ಅನಾಮಿಕ ಬಳಕೆದಾರರು ಈ ಸೈಟ್‌ನಲ್ಲಿ ಜನಾಂಗೀಯವಾದಿ ಪುರುಷಪಾರಮ್ಯವಾದಿ ಚಿಂತನೆಗಳನ್ನು ಬಿತ್ತುತ್ತಿರುತ್ತಾರೆ. ಅದೇ ರೀತಿ ಡೈಲಿ ಸ್ಟಾರ್ಮರ್ ಎಂಬ ಜಾಲತಾಣವೊಂದು ಬಿಳಿಯ ಜನಾಂಗೀಯವಾದಿ ಚಿಂತನೆಗಳನ್ನು ಹಲವು ವರ್ಷಗಳಿಂದ ಹರಡುತ್ತಾ ಬಂದಿದೆ. ಅಂದರೆ ಜನಾಂಗೀಯ ದಾಳಿಗಳ ಹಿಂದೆ ಒಬ್ಬ ವ್ಯಕ್ತಿಯ ಮನಸ್ಥಿತಿಯಷ್ಟೇ ಕೆಲಸ ಮಾಡುತ್ತಿಲ್ಲ, ಬದಲಿಗೆ ಸಂಘಟಿತ ಗುಂಪುಗಳು ಇದರ ಹಿಂದಿವೆ. ಆದರೆ ಇಂತಹ ಜನಾಂಗೀಯ ದ್ವೇಷವನ್ನು ಪ್ರತಿಪಾದಿಸುವ ಈ ಆನ್‌ಲೈನ್ ಜಾಲತಾಣಗಳನ್ನು ನಿಯಂತ್ರಿಸುವ ಬಗ್ಗೆ ಕಾನೂನು ಅನುಷ್ಠಾನ ಸಂಸ್ಥೆಗಳ ಬಳಿ ಖಚಿತವಾದ ಉತ್ತರ ಸಿಗುವುದಿಲ್ಲ. ಇತ್ತ ಮಾಹಿತಿ ತಂತ್ರಜ್ಞಾನ ಕಂಪೆನಿಗಳು, ಮುಸ್ಲಿಮ್ ತೀವ್ರವಾದಿ ಗುಂಪುಗಳ ಆನ್‌ಲೈನ್‌ಗಳನ್ನು ಮಟ್ಟಹಾಕಲು ತೋರಿದ್ದ ಆಸಕ್ತಿಯನ್ನು ಬಿಳಿಯ ಜನಾಂಗೀಯವಾದಿ ಚಿಂತನೆಗಳ ಜಾಲತಾಣಗಳನ್ನು ನಿಯಂತ್ರಿಸುವ ವಿಷಯದಲ್ಲಿ ಪ್ರದರ್ಶಿಸುತ್ತಿಲ್ಲ. ಅಧಿಕಾರಕ್ಕೇರಿದ ಬಳಿಕ ಬಿಳಿಯ ಜನಾಂಗೀಯ ಶ್ರೇಷ್ಠತಾವಾದವು ಅಮೆರಿಕದ ರಾಜಕೀಯದಲ್ಲಿ ಒಂದು ವಿಧದಲ್ಲಿ ಮಾನ್ಯತೆಯನ್ನು ಪಡೆದುಕೊಂಡಂತೆ ಕಾಣುತ್ತಿದೆ. ಇದೀಗ ಟ್ರಂಪ್ ಅವರ ಆಡಳಿತ ವ್ಯವಸ್ಥೆಯಲ್ಲಿ ಅದು ಆಳವಾಗಿ ಬೇರೂರತೊಡಗಿದೆ.

 ಬಿಳಿಯ ಅಮೆರಿಕನ್ನರ ಉದ್ಯೋಗಾವಕಾಶಗಳನ್ನು ವಲಸಿಗರು ಕಸಿದುಕೊಳ್ಳುತ್ತಿದ್ದಾರೆಂಬ ವಿಷಯ ಮುಖ್ಯವಾಹಿನಿಯ ಟಿವಿ ವಾಹಿನಿಗಳಲ್ಲಿ ಚರ್ಚೆಯಾಗುತ್ತಿವೆ.ಡೆಮಾಕ್ರಾಟಿಕ್ ಪಕ್ಷದ ಸಂಸದರೊಬ್ಬರು ಫಾಕ್ಸ್‌ಟಿವಿಯಲ್ಲಿ ವೀಕ್ಷಕರನ್ನುದ್ದೇಶಿಸಿ, ಅಮೆರಿಕನ್ ಮತದಾರರೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಲಸಿಗರು ನಿಮ್ಮನ್ನು ತೆರವುಗೊಳಿಸಲಿದ್ದಾರೆಂದು ಪ್ರಚೋದನಾಕಾರಿ ಭಾಷಣ ಮಾಡಿದ್ದರು.

 ಬಿಳಿಯ ಜನಾಂಗೀಯ ವಾದಿಗಳ ಹಿಂಸಾಚಾರಕ್ಕೆ ಇತ್ತ ಆಡಳಿತಾತ್ಮಕ ಶಕ್ತಿಗಳ ಕುಮ್ಮಕ್ಕೂ ಕಾರಣವಾಗಿದೆ. ಕಳೆದ ಮೇನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ಲಾರಿಡಾದಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ, ದೇಶದಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ನೆರೆದ ಸಭಿಕರನ್ನುದ್ದೇಶಿಸಿ ಟ್ರಂಪ್ ಅವರು, ವಲಸಿಗರ ಹೆಚ್ಚಳವನ್ನು ಹೇಗೆ ತಡೆಗಟ್ಟಬಹುದೆಂದು ಪ್ರಶ್ನಿಸಿದಾಗ, ಸಭೆಯಲ್ಲಿದ್ದವನೊಬ್ಬ, ‘ವಲಸಿಗರಿಗೆ ಗುಂಡಿಕ್ಕಿ ’ಎಂದು ಹೇಳಿದ್ದ. ಅಮೆರಿಕ ಅಧ್ಯಕ್ಷರ ಮುಂದೆಯೇ ಇಂತಹ ಪ್ರಚೋದನಾಕಾರಿ ಉತ್ತರವನ್ನು ನೀಡಲು ಸಾಧ್ಯವಿರುವುದಾದರೆ ಆ ದೇಶದಲ್ಲಿ ಜನಾಂಗೀಯ ದ್ವೇಷವು ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ಅರಿಯಬಹುದಾಗಿದೆ.

     2001ರಿಂದೀಚೆಗೆ ಹೆಚ್ಚಿನ ಸಂಖ್ಯೆಯ ಅಮೆರಿಕನ್ ಪ್ರಜೆಗಳು ತಮ್ಮ ದೇಶದ ಬಿಳಿಯ ಜನಾಂಗೀಯವಾದಿ ಭಯೋತ್ಪಾದಕರಿಂದ ಹತ್ಯೆಯಾಗಿದ್ದಾರೆಂಬುದು ಅಮೆರಿಕದ ತನಿಖಾದಳ ಎಫ್‌ಬಿಐ ವರದಿ ಹೇಳಿದೆ. ಇದರಲ್ಲಿ ಮುಸ್ಲಿಮ್ ಭಯೋತ್ಪಾದಕರ ಯಾವ ಪಾತ್ರವೂ ಇಲ್ಲ ಎಂದು ಅದು ಹೇಳುತ್ತದೆ. ಆದಾಗ್ಯೂ, ಬಿಳಿಯ ಜನಾಂಗೀಯವಾದಕ್ಕೆ ಅಂಕುಶ ಹಾಕಲು ಅಮೆರಿಕದ ಕಾನೂನು ಸಂಸ್ಥೆಗಳು ಮುಂದಾಗುತ್ತಿಲ್ಲ. ಜನಾಂಗೀಯವಾದಿ ದಾಳಿಗಳು ನಡೆದಾಗಲೆಲ್ಲ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಿಳಿಯ ರಾಷ್ಟ್ರೀಯವಾದವನ್ನು ಖಂಡಿಸುತ್ತಾರೆ. ಮತ್ತೆ ಅದೇ ಬಾಯಲ್ಲಿ ಅವರು ಬಿಳಿಯ ಜನಾಂಗೀಯರಲ್ಲಿ ತೀವ್ರವಾದವನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕಾಗಿದೆ. ಬಿಳಿಯ ರಾಷ್ಟ್ರೀಯವಾದವನ್ನು ಪರೋಕ್ಷವಾಗಿ ಬೆಂಬಲಿಸುವ ಟಿವಿ ಕಾರ್ಯಕ್ರಮಗಳಿಗೆ ಕೆಲವು ಸಂಸ್ಥೆಗಳು ಪ್ರಾಯೋಜಕತ್ವವನ್ನೂ ನೀಡುತ್ತಿವೆ. ರಾಜಕೀಯ ಮತ್ತು ಧಾರ್ಮಿಕ ಇಚ್ಛಾಶಕ್ತಿಯಷ್ಟೇ ಇಂತಹ ಜನಾಂಗೀಯ ದ್ವೇಷಗಳನ್ನು ತಡೆಯಬಹುದು. ಈ ಕುರಿತಂತೆ ಪಾಶ್ಚಾತ್ಯ ದೇಶಗಳು ಪ್ರದರ್ಶಿಸುತ್ತಿರುವ ವೌನ, ಜಗತ್ತನ್ನು ಇನ್ನೊಂದು ದೊಡ್ಡ ಹಿಂಸೆಯ ಕೂಪದೆಡೆಗೆ ತಳ್ಳುವ ಎಲ್ಲ ಸೂಚನೆಗಳು ಕಾಣುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News