ಮಹಾಮಳೆಗೆ ಕೊಡಗಿನಲ್ಲಿ ಏಳು ಬಲಿ: ಬಹುತೇಕ ಪ್ರದೇಶಗಳಲ್ಲಿ ಜಲದಿಗ್ಬಂಧನ

Update: 2019-08-09 13:47 GMT

ಮಡಿಕೇರಿ, ಆ.9: ಕಳೆದ ಐದು ದಿನಗಳಿಂದ ಕೊಡಗಿನಲ್ಲಿ ಆರ್ಭಟಿಸುತ್ತಿರುವ ಮಹಾಮಳೆ ಏಳು ಮಂದಿಯನ್ನು ಬಲಿ ತೆಗೆದುಕೊಂಡಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮಗಳು ಜಲಾವೃತಗೊಂಡು ಆತಂಕವನ್ನು ಸೃಷ್ಟಿಸಿದೆ.

ಭಾರೀ ಮಳೆಗೆ ಗುಡ್ಡ ಕುಸಿದ ಪರಿಣಾಮ ಜಿಲ್ಲೆಯ ಭಾಗಮಂಡಲ ಸಮೀಪದ ಕೋರಂಗಾಲ ಗ್ರಾಮದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಅತ್ತೇಡಿ ಯಶವಂತ, ಬೋಳನ ಬಾಲಕೃಷ್ಣ, ಬೋಳನ ಯಮುನಾ ಕಾಳನ ಉದಯ ಹಾಗೂ ವಸಂತ ಎಂದು ಗುರುತಿಸಲಾಗಿದೆ. ವೀರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ತೋರ ಪ್ರದೇಶದಲ್ಲಿ ಸಂಭವಿಸಿದ ಮತ್ತೊಂದು ಭೂ ಕುಸಿತ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದು, 8 ಮಂದಿ ನಾಪತ್ತೆಯಾಗಿದ್ದಾರೆ.

ಈ ಪ್ರದೇಶದ ನಾಲ್ಕೈದು ಮನೆಗಳ ಮೇಲೆ ಭೂ ಕುಸಿತವಾಗಿದ್ದು, ಒಕ್ಕಲಿಗರ ಪರಮೇಶ್ವರ ಎಂಬವರ ಪತ್ನಿ ಮಮತ 40 ವರ್ಷ ಹಾಗೂ ಮಗಳು ಲಿಖಿತಾ (15) ಇವರುಗಳ ಮೃತ ದೇಹ ಪತ್ತೆಯಾಗಿದೆ. 

ದುರ್ಘಟನೆಯಲ್ಲಿ ಸಿಲುಕಿ ಶಂಕರ, ಅಪ್ಪು(55), ಲೀಲಾ, ಹರೀಶ ಎಂಬವರ ಪತ್ನಿ, ಮತ್ತೊಂದು ಕುಟುಂಬದ ದೇವಕ್ಕಿ(65), ಅನು(35), ಅಮೃತ(13) ಹಾಗೂ ಆದಿತ್ಯ(10) ಎಂಬವರೆ ನಾಪತ್ತೆಯಾದ ವ್ಯಕ್ತಿಗಳಾಗಿದ್ದು, ಈ ಭಾಗದಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ಶೋಧ ಮತ್ತು ರಕ್ಷಣಾ ಕಾರ್ಯವನ್ನು ಶನಿವಾರ ಮುಂದುವರಿಸಲಾಗುವುದೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಸಂತ್ರಸ್ತರ ರಕ್ಷಣೆಗಾಗಿ ಭಾರತೀಯ ಸೇನೆ, ಎನ್‍ಡಿಆರ್‍ಎಫ್ ಮತ್ತು ಪೊಲೀಸ್ ಇಲಾಖೆ ಧಾವಿಸಿ ಸುಮಾರು 300 ಕುಟುಂಬಗಳನ್ನು ರಕ್ಷಿಸಿದೆ. ಆದರೆ ದುರದೃಷ್ಟವಶಾತ್ ಇಬ್ಬರು ಮೃತಪಟ್ಟಿರುವುದಲ್ಲದೆ, ಕೆಲವರು ನಾಪತ್ತೆಯಾಗಿರುವುದಾಗಿ ಅವರು ತಿಳಿಸಿದ್ದಾರೆ. ಕೋರಂಗಾಲ ಘಟನೆ ಮತ್ತು ತೋರ ದುರಂತ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 7 ಮಂದಿ ಮೃತ ಪಟ್ಟಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಲಾಗಿದೆ.

5 ಕೋಟಿ ರೂ.ಬಿಡುಗಡೆ
ಕೊಡಗು ಜಿಲ್ಲೆಯ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಸಂಕಷ್ಟದಲ್ಲಿರುವವರ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ತುರ್ತು 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಆದೇಶಿಸಿದೆ. 

ಜಲ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ನೂರಾರು ಮನೆಗಳು, ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದ್ದು, ಗುಹ್ಯ ಗ್ರಾಮದ ಕಕ್ಕಟ್ಟುಕಾಡು ಎಂಬಲ್ಲಿ 6 ಮನೆಗಳು ಕುಸಿದಿದ್ದು, ಹತ್ತಾರು ಮನೆಗಳು ಜಲಾವೃತಗೊಂಡಿವೆ. ಅಲ್ಲದೆ ಎಲ್ಲಾ ರೀತಿಯ ಸಂಪರ್ಕ ಕಡಿದು ಕೊಂಡು ಇಡೀ ಗ್ರಾಮ ದ್ವೀಪದಂತಾಗಿದೆ. ಜಿಲ್ಲೆಯ ವಿವಿಧೆಡೆ ಹತ್ತಾರು ಮನೆಗಳು ಕುಸಿದಿದ್ದು, ಮತ್ತಷ್ಟು ಮನೆಗಳು ಕುಸಿಯುವ ಹಂತದಲ್ಲಿವೆ.

ಜಿಲ್ಲೆಯ ಕುಶಾಲನಗರ, ಗೋಣಿಕೊಪ್ಪ ಪಟ್ಟಣಗಳಿಗೂ ನೀರು ನುಗ್ಗಿದ್ದು, ಸಿದ್ದಾಪುರದ ಕರಡಿಗೋಡು, ನೆಲ್ಯಹುದಿಕೇರಿಯ ಬರಡಿ ಮತ್ತಿತರರ ಪ್ರದೇಶಗಳ ನೂರಾರು ಮನೆಗಳು ಕಳೆದ ಎರಡು ದಿನಗಳಿಂದ ನೀರಿನಲ್ಲಿ ಮುಳುಗಿವೆ. ಅಲ್ಲಿನ ನಿವಾಸಿಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಪ್ರವಾಹದ ಹಿನ್ನೆಲೆಯಲ್ಲಿ ಸಂತ್ರಸ್ತರಾದವರಿಗಾಗಿ ಜಿಲ್ಲೆಯ ವಿವಿಧೆಡೆ 25 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 604 ಕುಟುಂಬಗಳ 2136 ಮಂದಿಯನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ 58 ಪ್ರದೇಶಗಳಲ್ಲಿ ಪ್ರವಾಹ ತಲೆದೋರಿದ್ದು, 14 ಕಡೆಗಳಲ್ಲಿ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ.

ಕುಶಾಲನಗರ ಸಮೀಪದ ಗಂಧದಕೋಠಿ ಹಾಗೂ ತಾವರೆಕೆರೆ ಬಳಿ  ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಸುಮಾರು 6 ಅಡಿಗಳಷ್ಟು ನೀರು ಹರಿಯುತ್ತಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಈ ಮಾರ್ಗವಾಗಿ ತೆರಳುವ ವಾಹನಗಳನ್ನು ಗುಡ್ಡೆಹೊಸೂರು ಬಳಿಯಲ್ಲೇ ತಡೆದು ಹಾರಂಗಿ ಮಾರ್ಗವಾಗಿ ಕಳುಹಿಸಲಾಗುತ್ತಿದೆ. ಮತ್ತೊಂದೆಡೆ ಕುಶಾಲನಗರ-ಕೊಣನೂರು ರಾಜ್ಯ ಹೆದ್ದಾರಿಯ ಹೆಬ್ಬಾಲೆ ಬಳಿ ರಸ್ತೆಯ ಮೇಲೆ ಕಾವೇರಿ ನೀರು ಹರಿಯುತ್ತಿರುವುದರಿಂದ ಆ ಮಾರ್ಗದಲ್ಲೂ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಮಡಿಕೇರಿ-ವೀರಾಜಪೇಟೆಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಬೇತ್ರಿ ಹಾಗೂ ಕದನೂರುಗಳಲ್ಲಿ ಗುರುವಾರದ ಪ್ರವಾಹ ಪರಿಸ್ಥಿತಿ ಹಾಗೆಯೇ ಮುಂದುವರಿದಿರುವುದರಿಂದ ಶುಕ್ರವಾರವೂ ವಾಹನ ಸಂಚಾರ ಸ್ಥಗಿತಗೊಂಡಿದೆ. ಅತ್ತ ಕುಶಾಲನಗರ- ಸಿದ್ದಾಪುರ ರಸ್ತೆಯ ಗುಡ್ಡೆಹೊಸೂರು ತೆಪ್ಪದ ಕಂಡಿ ಬಳಿ ಕಾವೇರಿ ಪ್ರವಾಹ ರಸ್ತೆಯ ಮೇಲೆ ಬಂದಿರುವುದರಿಂದ  ಆ ಮಾರ್ಗದಲ್ಲೂ ಶುಕ್ರವಾರ ಅಪರಾಹ್ನದಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಒಟ್ಟಿನಲ್ಲಿ ಜಿಲ್ಲೆಯನ್ನು ಸಂಪರ್ಕಿಸುವ ಬಹುತೇಕ ರಸ್ತೆಗಳು ನೀರಿನಿಂದ ಆವೃತ್ತವಾಗಿರುವುದರಿಂದ ಕೊಡಗು ಅಕ್ಷರಶಃ ಜಲದಿಗ್ಬಂಧನಕ್ಕೆ ಒಳಗಾಗಿದೆ.

ಶ್ರೀಭಗಂಡೇಶ್ವರನಿಗೆ ಜಲದಿಗ್ಬಂಧನ
ತಲಕಾವೇರಿ-ಭಾಗಮಂಡಲ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ಕಾವೇರಿ-ಕನ್ನಿಕೆ ನದಿಗಳು ಉಕ್ಕಿಹರಿಯುವುದರೊಂದಿಗೆ ಭಾಗಮಂಡಲದ ಭಗಂಡೇಶ್ವರ ದೇವಾಲಯ ಸಂಪೂರ್ಣ ಜಲಾವೃತಗೊಂಡಿರುವುದಲ್ಲದೆ, ಭಗಂಡೇಶ್ವರನ ಗರ್ಭಗುಡಿವರೆಗೂ ನೀರು ನುಗ್ಗಿದೆ. ಕಳೆದ 25 ವರ್ಷಗಳ ಬಳಿಕ ಕಾವೇರಿ ಶಿವನ ಪಾದ ಸ್ಪರ್ಶಿಸಿರುವುದಾಗಿ ಅಲ್ಲಿನ ಅರ್ಚಕರು ತಿಳಿಸಿದ್ದಾರೆ.

ಕೇಂದ್ರ ಸಚಿವರ ಭೇಟಿ: ಜಲ ಪ್ರವಾಹಕ್ಕೆ ಸಿಲುಕಿರುವ ಕೊಡಗಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಶುಕ್ರವಾರ ಭೇಟಿ ನೀಡಿದ್ದು, ಕುಶಾಲನಗರ, ಭಾಗಮಂಡಲ, ವೀರಾಜಪೇಟೆ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇದರೊಂದಿಗೆ ಬಿಜೆಪಿಯ ವೀಕ್ಷಣಾ ತಂಡವೂ ಶುಕ್ರವಾರ ಕೊಡಗಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ನೇತೃತ್ವದ ಈ ತಂಡದಲ್ಲಿ ಶಾಸಕರುಗಳಾದ ಸಿ.ಟಿ. ರವಿ, ವಿ. ಸೋಮಣ್ಣ, ಪ್ರೀತಂ ಗೌಡ ಇದ್ದರೆ, ಜಿಲ್ಲೆಯ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ ಸಿಂಹ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರುಗಳೂ ಸಾಥ್ ನೀಡಿದರು. 

ಕಾವೇರಿಯ ಪ್ರವಾಹ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಮೂರ್ನಾಡು ಸಮೀಪದ ಬೇತ್ರಿಯ ಸೇತುವೆಯ ಮೇಲೆ 6 ಅಡಿಯಷ್ಟು ನೀರು ಹರಿಯುತ್ತಿದೆ. ಇದರಿಂದ ಸುತ್ತಮುತ್ತಲಿನ ಮನೆಗಳು, ತೋಟಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಬೇತ್ರಿ ಬಳಿಯ ಹೆಮ್ಮಾಡಿನಲ್ಲಿ ಹತಾರು ಮನೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 

ವೀರಾಜಪೇಟೆ ತಾಲೂಕಿನಲ್ಲಿ ಮಳೆ ಭಾರೀ ಅನಾಹುತವನ್ನೆ ಸೃಷ್ಟಿಸಿದ್ದು, ತಾಲ್ಲೂಕಿನ ಬಹುತೇಕ ಭಾಗ ಮುಳುಗಡೆಯ ಸ್ಥಿತಿಯಲ್ಲಿದೆ. ನದಿ ಪ್ರವಾಹದ ನೀರು ಗ್ರಾಮೀಣ ಭಾಗ ಮಾತ್ರವಲ್ಲದೆ, ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ಪಟ್ಟಣದ ಭಾಗವನ್ನು ಆವರಿಸಿಕೊಂಡು ಜನರಲ್ಲಿ ಆತಂಕವನ್ನು ಮೂಡಿಸಿದೆ. ಕೇರಳದ ಗಡಿಭಾಗವಾದ ಕಾರಣ ಇಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೆರಳಲು ಸಂಪರ್ಕ ಸಾಧ್ಯವಾಗದೆ ಜನಪರದಾಡುತ್ತಿದ್ದಾರೆ. ಬಹುತೇಕ ಗದ್ದೆ ತೋಟಗಳು ಜಲಾವೃತಗೊಂಡಿದ್ದು, ನೂರಾರು ಮನೆಗಳು ಮುಳುಗಡೆಯಾಗಿವೆ. ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳು ಕೂಡ ಅರ್ಧದಷ್ಟು ನೀರು ಆವರಿಸಿದೆ.

ವೀರಾಜಪೇಟೆಯ ಬೆಟ್ಟಪ್ರದೇಶದ ಸುಂಕದಕಟ್ಟೆಯಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತವಾಗಿದ್ದು, ಹಲ ಮನೆಗಳು ಅಪಾಯಕ್ಕೆ ಸಿಲುಕಿ ಕೊಂಡಿದ್ದು, ಸಂಕಷ್ಟದಲ್ಲಿರುವವರ್ನು ಸ್ಥಳಾಂತರಿಸಲಾಗಿದೆ.

ವೀರಾಜಪೇಟೆ ತಾಲೂಕಿನ ಬಹುತೇಕ ಪ್ರದೇಶಗಳು ಜಲಾವೃತವಾಗಿ, ರಸ್ತೆಗಳು ಮುಳುಗಡೆಯಾಗಿರುವುದರಿಂದ ಖಾಸಗಿ ಬಸ್ ಸಂಚಾರ ವ್ಯವಸ್ಥೆ ಬಹುತೇಕ ಸ್ಥಗಿತವಾಗಿದೆ. ದಕ್ಷಿಣ ಕೊಡಗಿನ ಹೈಸೊಡ್ಲೂರು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬಿರುನಾಣಿ ಬೆಕ್ಕೆಸೊಡ್ಲೂರು ರಸ್ತೆ ಲಕ್ಷ್ಮಣ ತೀರ್ಥ ನದಿಯ ಪ್ರವಾಹದಲ್ಲಿ ಮುಳುಗಿದೆ. ಕಾನೂರು ನಿಡುಗುಂದ ಹಾಡಿ ನಿವಾಸಿಗಳನ್ನು ಬೆಕ್ಕೆಸೊಡ್ಲೂರು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪೊನ್ನಂಪೇಟೆಯಲ್ಲಿ ಮನೆಯೊಂದು ಕುಸಿದು ಬಿದ್ದು ನಷ್ಟವುಂಟಾಗಿದೆ. ಗೋಣಿಕೊಪ್ಪ ಪಟ್ಟಣದ ತುಂಬಾ ಪ್ರವಾಹದ ನೀರು ಆವರಿಸಿದೆ. 

ಜಿಲ್ಲಾಡಳಿತ ಮನವಿ
ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಅಗತ್ಯ ಸಾಮಾಗ್ರಿಗಳನ್ನು ಒದಗಿಸುವಂತೆ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಅಡುಗೆ ಸಾಮಗ್ರಿಗಳು, ಗ್ಯಾಸ್ ಸ್ಟೌ, ಪ್ಲಾಸ್ಟಿಕ್ ಬಕೆಟ್ಸ್, ರೈನ್ ಕೋಟ್ಸ್, ಸ್ವೆಟರ್, ಕಂಬಳಿ, ಪಾದರಕ್ಷೆ , ಸ್ಯಾನಿಟರಿ ನ್ಯಾಫ್ಕಿನ್ಸ್, ಪ್ಲಾಸ್ಟಿಕ್ ಮ್ಯಾಟ್ಸ್, ಬೆಡ್‍ಶೀಟ್, ಪಿಲ್ಲೋಸ್, ಧರಿಸಲು ವಸ್ತ್ರಗಳು, ಶಾಲಾ ಬ್ಯಾಗ್ ಮತ್ತು ಲಗ್ಗೇಜ್ ಬ್ಯಾಗ್‍ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವಂತೆ ಜಿಲ್ಲಾಡಳಿ ಕೋರಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News