ಪ್ರವಾಹ ಪೀಡಿತ ಸ್ಥಳದಲ್ಲಿ ಸಿಎಂಗೆ ದಿಗ್ಬಂಧನ: ಸಂತ್ರಸ್ತರ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ

Update: 2019-08-09 14:20 GMT

ಗದಗ, ಆ. 9: ಪ್ರವಾಹ ಪೀಡಿತ ಜನರ ಪರಿಸ್ಥಿತಿ ಅಧ್ಯಯನಕ್ಕೆ ತೆರಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪಗೆ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮಸ್ಥರು ದಿಗ್ಬಂಧನ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಸಂತ್ರಸ್ತರ ಮೇಲೆ ಲಘುಲಾಠಿ ಪ್ರಹಾರ ನಡೆಸಿದ ಅಮಾನವೀಯ ಘಟನೆ ನಡೆದಿದೆ.

ಶುಕ್ರವಾರ ಕೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು. ಆದರೆ, ಪ್ರವಾಹ ಪೀಡಿತ ಸಂತ್ರಸ್ತರ ಮನವಿ ಆಲಿಸದೆ ಹಿಂದಿರುಗಲು ಮುಂದಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಸಿಎಂ ಕಾರಿಗೆ ಮುತ್ತಿಗೆ ಹಾಕಿದರು.

ಸಂತ್ರಸ್ತರಿಗೆ ಸ್ಥಳದಲ್ಲಿಯೇ ಪರಿಹಾರ ಘೋಷಣೆ ಮಾಡಬೇಕು. ಅಲ್ಲದೆ, ಪುನರ್ವಸತಿ ಕಲ್ಪಿಸುವ ಸಂಬಂಧ ಸೂಕ್ತ ಭರವಸೆ ನೀಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದು ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಲು ಮುಂದಾದರು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಗ್ರಾಮಸ್ಥರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು.

ಸಿಎಂ ಬೆಂಗಾವಲು ವಾಹನಕ್ಕೆ ಗ್ರಾಮಸ್ಥರು ಕೈಗಳಿಂದ ಗುದ್ದಿ ‘ಮುಂದೆ ಹೇಗೆ ಹೋಗ್ತಿರೀ ನಾವು ನೋಡ್ತೀವಿ’ ಎಂದು ಬೆದರಿಕೆ ಹಾಕಿದರು. ಈ ಮಧ್ಯೆಯೇ ಸಿಎಂ ಯಡಿಯೂರಪ್ಪ ಅವರಿದ್ದ ವಾಹನವನ್ನು ಪೊಲೀಸರು ಗ್ರಾಮದಿಂದ ಹೊರಗೆ ಕಳುಹಿಸಿದರು.

ಗ್ರಾಮಕ್ಕೆ ಬಂದಿದ್ದೇಕೆ?: ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸಂತ್ರಸ್ತರ ಭೇಟಿ ಮಾಡಿದೆ ಹಿಂದಿರುಗಿದ್ದಾರೆ. ಹೀಗಾದರೆ ಅವರು ನಮ್ಮ ಜಿಲ್ಲೆಗೆ ಬಂದಿದ್ದು ಏಕೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರು, ವೃದ್ಧರು ಸೇರಿದಂತೆ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದ ಪೊಲೀಸರು ಹಾಗೂ ಬಿಜೆಪಿ ಮುಖಂಡರು, ಮುಖ್ಯಮಂತ್ರಿ ಗ್ರಾಮದಿಂದ ಹೊರ ಹೋದ ಬಳಿಕ ಕ್ಷಮೆ ಕೋರಿದರು. ಆದರೂ, ಜನರ ಆಕ್ರೋಶ ತಣ್ಣಗಾಗಲಿಲ್ಲ.

ನಾಳೆ ಕೇಂದ್ರ ಸಚಿವೆ ಭೇಟಿ: ರಾಜ್ಯದಲ್ಲಿನ ನೆರೆ ಪರಿಸ್ಥಿತಿ ಕುರಿತು ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ. ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಭೇಟಿ ನಂತರ ನೆರೆ ಪರಿಹಾರಕ್ಕೆ ಕೇಂದ್ರದಿಂದ ನೆರವು ಪಡೆಯಲಾಗುವುದು. ಸದ್ಯಕ್ಕೆ ನೂರು ಕೋಟಿ ರೂ.ಹಣವನ್ನು ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಬಿಡುಗಡೆಗೊಳಿಸಲಾಗಿದ್ದು, ಸಂತ್ರಸ್ತರಿಗಾಗಿ ಯಾವುದೇ ರೀತಿಯ ಸಹಾಯಕ್ಕೂ ಸರಕಾರ ಸಿದ್ದವಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಸಂತ್ರಸ್ತರಿಗೆ ತೊಂದರೆ ಖೇದಕರ

ಗದಗದ ಕೊಣ್ಣೂರಿನಲ್ಲಿ ನನ್ನ ಭೇಟಿಯ ವೇಳೆ ಪ್ರವಾಹ ಸಂತ್ರಸ್ತರಿಗೆ ತೊಂದರೆಯಾಗಿರುವುದು ಖೇದಕರ. ಸಂಯಮದಿಂದ ವರ್ತಿಸಲು ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ’

-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ(ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News