ಸಂತ್ರಸ್ತರ ನೆರವಿಗೆ ತೆರಳಿ ಪ್ರವಾಹದ ಮಧ್ಯೆ ಸಿಲುಕಿದ ಎಚ್.ಕೆ.ಪಾಟೀಲ್ ನೇತೃತ್ವದ ತಂಡ

Update: 2019-08-09 14:29 GMT

ಬೆಂಗಳೂರು, ಆ. 9: ಗದಗ ಜಿಲ್ಲೆ ಕೊಣ್ಣೂರು ಮತ್ತು ಹೊಳೆ ಆಲೂರು ಮಧ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ಥರಿಗೆ ಬ್ಲಾಂಕೆಟ್ ವಿತರಿಸಲು ತೆರಳಿದ್ದ ಮುಂಬೈ- ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳ ಕೆಪಿಸಿಸಿ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದ ತಂಡ ಪ್ರವಾಹದ ಮಧ್ಯೆ ಸಿಲುಕಿದ ಘಟನೆ ನಡೆದಿದೆ.

ಸುದ್ಧಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಎಚ್.ಕೆ.ಪಾಟೀಲ್ ನೇತೃತ್ವದ ತಂಡವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದೆ. ಪ್ರವಾಹದ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದ ಪಾಟೀಲ್‌ಗೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ಕರೆ ಮಾಡಿ ಕ್ಷೇಮ ವಿಚಾರಿಸಿದರು.

ಮಲಪ್ರಭಾ ನದಿಯ ಪ್ರವಾಹದಿಂದ ಪೀಡಿತವಾಗಿರುವ ವಾಸನ್, ಬೂದಿಹಾಳ, ಕೊಣ್ಣೂರು, ಹೊಳೆ-ಆಲೂರು ಗ್ರಾಮಗಳ ಪ್ರವಾಹ ಪೀಡಿತ ಸಂತ್ರಸ್ಥರ ನೆರವಿಗೆ ಧಾವಿಸುವುದರ ಜೊತೆಗೆ ಕೆಪಿಸಿಸಿ ಸಮಿತಿ ಸದಸ್ಯರು ಅಧ್ಯಯನ ಪ್ರವಾಸ ಕೈಗೊಂಡ ಸಂದರ್ಭದಲ್ಲಿ 4 ಅಡಿ ಮಟ್ಟದ ನೀರಿನಲ್ಲಿ ವಾಹನ ಸಿಲುಕಿ ಹಾಕಿಕೊಂಡು ಮುಂದೆ ಪ್ರಯಾಣಿಸದ ಸ್ಥಿತಿ ಉಂಟಾಗಿತ್ತು. 2 ತಾಸುಗಳ ನಂತರ ಸಾವರಿಸಿಕೊಂಡು ಪ್ರಯಾಣ ಮುಂದುವರೆಸಿ ಗೂಡ್ಸ್ ರೈಲಿನಲ್ಲಿ ಬಾಗಲಕೋಟೆಗೆ ಬಂದಿಳಿದ ಘಟನೆ ನಡೆಯಿತು. ಪ್ರವಾಹ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದ ವೇಳೆ ಸಿಎಂ ಯಡಿಯೂರಪ್ಪ ಅವರು ಎಚ್.ಕೆ.ಪಾಟೀಲರಿಗೆ ದೂರವಾಣಿ ಮೂಲಕ ಕರೆ ಮಾಡಿ ಪರಿಸ್ಥಿತಿಯನ್ನು ವಿಚಾರಿಸಿದರು. ಸಿಎಂ ಕರೆಯ ನಂತರ ಅರ್ಧ ಗಂಟೆಯಲ್ಲಿ ಪೊಲೀಸ್ ವಾಹನ ಮತ್ತಿತರ ವಾಹನಗಳು ಧಾವಿಸಿದವು.

ಈ ಸಂದರ್ಭದಲ್ಲಿ ನೆರೆ ಸಂತ್ರಸ್ಥರ ನೆರವಿಗೆ ಬರುವಂತೆ, ನನ್ನ ಕಾಳಜಿಗಿಂತ ಹೆಚ್ಚು ನೆರೆ ಸಂತ್ರಸ್ಥರ ಕಾಳಜಿ ಮಾಡಬೇಕಾಗಿರುವುದು ಅವಶ್ಯಕತೆಯಿದೆ ಎಂದು ಎಚ್.ಕೆ. ಪಾಟೀಲ್, ಸಿಎಂಗೆ ತಿಳಿಸಿದರು. ಬಾಗಲಕೋಟೆಗೆ ಬೋಟುಗಳ ಮೂಲಕ ತೆರಳುವ ಪ್ರಯತ್ನದಲ್ಲಿದ್ದಾಗ ಸ್ಥಳೀಯರು ಮತ್ತು ಜೊತೆಗಿದ್ದವರೆಲ್ಲ ಗೂಡ್ಸ್ ರೈಲಿನ ಮೂಲಕ ಹೋಗುವಂತೆ ಸಲಹೆ ಮಾಡಿದರು. ಕೊಣ್ಣೂರು, ಹೊಳೆ ಆಲೂರು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದು, ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ನೆರೆ ಪರಿಸ್ಥಿತಿ ಗಂಭೀರವಾಗಿದ್ದರೂ ಪರಿಹಾರ ಕಾರ್ಯ ಚುರುಕುಗೊಂಡಿಲ್ಲ ಎಂದು ಸಿಎಂ ಗಮನಕ್ಕೆ ತರಲಾಯಿತು. ಜುಲೈ 31ರ ಒಳಗೆ ಮುಗಿದು ಹೋಗಿರುವ ಫಲಸು ಬಿಮಾ ಯೋಜನೆಯ ವಿಮಾ ಕಂತು ಪಾವತಿ ಅವಧಿಯನ್ನು ಆ.31ರ ವರೆಗೆ ವಿಸ್ತರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಇದೇ ಸಂದರ್ಭದಲ್ಲಿ ಕೋರಲಾಯಿತು.

ಗಂಜಿ ಕೇಂದ್ರಗಳು, ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಯನ ಸಮಿತಿ ಅವಶ್ಯಕ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕೈಗೊಂಡಿತು. ಪ್ರವಾಸ ಮುಂದುವರೆದಿದ್ದು, ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News