ಮಳೆ ಆರ್ಭಟ: ಸಕಲೇಶಪುರ ತಾಲೂಕಿನ ಶಾಲೆ-ಕಾಲೇಜುಗಳಿಗೆ ಆ.10 ಕ್ಕೆ ರಜೆ ಘೋಷಣೆ

Update: 2019-08-09 14:47 GMT

ಸಕಲೇಶಪುರ, ಆ.9: ತಾಲೂಕಿನಾದ್ಯಂತ ಮುಂದುವರಿದ ಮಳೆ ಆರ್ಭಟಕ್ಕೆ ಜನ-ಜೀವನ ಅಸ್ತವ್ಯಸ್ತಗೊಂಡಿದ್ದು, ಶಾಲೆ ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.

ಪಟ್ಟಣದ ಆಧಾರ್ ರಸ್ತೆ ಹಾಗೂ ಹೆಬ್ಬಸಾಲೆ ಗ್ರಾಮದ ಸಮೀಪ ಹಿನ್ನೀರಿನ ಮಟ್ಟ ಏರಿಕೆಯ ಪರಿಣಾಮ ಅನೇಕ ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ. ರಾಷ್ಟ್ರೀಯ ಹೆದ್ದಾರಿ ಭೂಕುಸಿತದಿಂದ ಸಂಚಾರ ಕೆಲಕಾಲ ಸ್ಥಗಿತವಾಗಿತ್ತು. ಅನೇಕ ಪ್ರದೇಶಗಳಲ್ಲಿ ಭೂಕುಸಿತ ಕಂಡುಬಂದಿದ್ದು, ಮಳೆಯ ಪ್ರಮಾಣ ಹೆಚ್ಚಾದರೆ ತಾಲೂಕಿನ ಜನತೆ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ.

ಪುರಸಭೆ ವ್ಯಾಪ್ತಿಯ ಕೊಡಗರಹಳ್ಳಿ ಬಳಿಯ ಮಸೀದಿಯ ತಡೆಗೋಡೆ ಉರುಳಿ ಬಿದ್ದಿದ್ದು, ಮಸೀದಿಗೆ ಭಾರೀ ಹಾನಿಯಾಗುವ ಸಾಧ್ಯತೆಗಳಿವೆ. ರಾಷ್ಟ್ರೀಯ ಹೆದ್ದಾರಿ ಮಾರನಹಳ್ಳಿ ಬಳಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ವಾಹನ ಸಂಚಾರ ಸುಗಮಗೊಳಿಸಲು ಅಗ್ನಿಶಾಮಕದಳ ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ಭಾರಿ ವಾಹನಗಳನ್ನು ನಿಲುಗಡೆ ಮಾಡಲಾಗಿದೆ.

ಪಟ್ಟಣದ ಆಝಾದ್ ರಸ್ತೆಯಲ್ಲಿನ ನಿವಾಸಿಗಳನ್ನು ಅಗ್ನಿಶಾಮಕ ದಳದವರು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ನೆರವು ನೀಡಿದರು. ಜನರಲ್ಲಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುತ್ತಿದ್ದರು. ತಾಲೂಕು ಆಡಳಿತ ಧ್ವನಿರ್ಧಕದ ಮೂಲಕ ಸುರಕ್ಷತೆಯ ಬಗ್ಗೆ ಎಚ್ಚರಿಕೆಯಿಂದ ಇರಲು ಮನವಿ ಮಾಡಿದೆ. ಪುರಸಭೆ ಕಟ್ಟಡದಲ್ಲಿ  ಗಂಜಿ ಕೇಂದ್ರ ತೆರೆಯಲಾಗಿದೆ. ತಾಲೂಕಿನ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ, ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News