×
Ad

ಮಹಾಮಳೆಗೆ ನಲುಗಿದ ನಂಜನಗೂಡು: 200ಕ್ಕೂ ಹೆಚ್ಚು ಮನೆಗಳು ಜಲಾವೃತ

Update: 2019-08-09 20:56 IST

ಮೈಸೂರು,ಆ.9: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಗೆ ನಂಜನಗೂಡು ನಲುಗಿ ಹೋಗಿದ್ದು, ಮನೆ- ರಸ್ತೆಯಲ್ಲಾ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ಥಗೊಂಡಿದೆ.

ಕಬಿನಿ ಜಲಾಶಯದಿಂದ ಒಂದು ಲಕ್ಷ ಕ್ಯುಸೆಕ್ಸ್ ನೀರನ್ನು ಹೊರಬಿಟ್ಟ ಹಿನ್ನಲೆ ನಂಜನಗೂಡಿನ ರಸ್ತೆಯಲ್ಲಾ ಜಲಾವೃತಗೊಂಡಿದ್ದು, ನಗರದ ಹಳ್ಳದಕೇರಿ, ಗೌರಿಘಟ್ಟ ಬೀದಿ, ತೋಪಿನ ಬೀದಿ, ಕುರುಬಗೇರಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ನಿನ್ನೆ ರಾತ್ರಿ ಹೆಚ್ಚಿನ ನೀರನ್ನು ಹರಿಯಬಿಡಲಾಗಿದ್ದು, ನಂಜನಗೂಡು-ಮೈಸೂರು ರಸ್ತೆಯ ಮಲ್ಲನ ಮೂಲೆ ಬಳಿಯ ರಾಷ್ಟ್ರೀಯ ಹೆದ್ದಾರಿ 266 ರ ರಸ್ತೆಯ ಮೇಲೆಲ್ಲಾ ನೀರು ಬಂದ ಪರಿಣಾಮ ಸಂಚಾರ ವ್ಯವಸ್ಥೆ ಬಂದ್ ಮಾಡಲಾಗಿದೆ. ಪ್ರಸಿದ್ದ ಯಾತ್ರಾ ಸ್ಥಳ ಶ್ರೀಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದವರೆಗೂ ನೀರು ಬಂದಿದ್ದು, ನದಿ ದಡದ ಅಕ್ಕಪಕ್ಕದಲ್ಲಿ ವಾಸವಾಗಿದ್ದ ಮತ್ತು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.

ಇನ್ನು, ನಂಜನಗೂಡು-ಮೈಸೂರು ರಸ್ತೆಯ ದೊಡ್ಡ ಸೇತುವೆ ಮುಳುಗುವ ಹಂತ ತಲುಪಿದ್ದು, ಭೋರ್ಗರೆಯುವಂತೆ ನೀರು ರಭಸದಿಂದ ಸಾಗುತ್ತಿದೆ. ಹಾಗೆ ಹೆಜ್ಜಿಗೆ, ಕುಳ್ಳಂಕನಹುಂಡಿ, ಕೆಂಪಿಸಿದ್ದನಹುಂಡಿ, ಮುಳ್ಳೂರು ಗ್ರಾಮಗಳಿಗೂ ನೀರು ನುಗ್ಗಿದ್ದು, ಕೆಂಪಿಸಿದ್ದನಹುಂಡಿಯಲ್ಲಿ ಕಾಳಯ್ಯ ಎಂಬುವವರ ಮನೆ ಕುಸಿದಿದೆ. ಮನೆಯಲ್ಲಿ ಎಂಟು ಜನರಿದ್ದು ಗೋಡೆ ಕುಸಿಯುವ ವೇಳೆ ಆ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ನಂಜನಗೂಡು-ಮೈಸೂರು ಹೆದ್ದಾರಿಯ ರಸ್ತೆ ಬಂದ್ ಮಾಡಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದ್ದು, ಪೊಲೀಸರು ಬದಲಿ ಮಾರ್ಗದ ವ್ಯವಸ್ಥೆ ಮಾಡಿದ್ದಾರೆ. ಹೆಜ್ಜಿಗೆ ಗ್ರಾಮದ ಸೇತುವೆ ಸಹ ಸಂಪೂರ್ಣವಾಗಿ ತುಂಬಿದ್ದು, ಅಲ್ಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪ್ರವಾಹವನ್ನು ನೋಡಲು ಸಾಗರೋಪಾದಿಯಲ್ಲಿ ಜನ ಆಗಮಿಸುತ್ತಿದ್ದು, ನೀರಿನ ಹತ್ತಿರ ಸುಳಿಯದಂತೆ ಪೊಲೀಸರು ಬ್ಯಾರೀಕೇಡ್‍ಗಳನ್ನು ಹಾಕಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ಮಳೆಯಿಂದ ಮುಳುಗಿರುವ ಜನರಿಗಾಗಿ ಗಿರಿ ಜಕಲ್ಯಾಣ ಮಂಟಪದಲ್ಲಿ ಗಂಜಿಕೇಂದ್ರ ತೆರೆಯಲಾಗಿದ್ದು, ಅಲ್ಲಿರುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಶಾಸಕ ಹರ್ಷವರ್ಧನ್ ಅಧಿಕಾರಿಗಳೊಂದಿಗೆ ಭೇಟಿ ನಿಡಿ ಪ್ರವಾಹದಲ್ಲಿ ಹಾನಿಯಾಗಿರುವ ಪ್ರದೇಶಗಳನ್ನು ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News