×
Ad

ನೆರೆ ಪರಿಹಾರ: ಒಂದು ದಿನದ ವೇತನ ನೀಡಲು ರಾಜ್ಯ ಸರಕಾರಿ ನೌಕರರ ನಿರ್ಧಾರ

Update: 2019-08-09 23:59 IST

ಬೆಂಗಳೂರು, ಆ.9: ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಜನರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರಕಾರಿ ನೌಕರರು ಒಂದು ದಿನದ ವೇತನ ನೀಡಲು ನಿರ್ಧರಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸರಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ ಹಿನ್ನಲೆ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಅವರಿಗೆ ಸಹಾಯಾರ್ಥವಾಗಿ ನಾವು ನೆರವು ನೀಡಲಿದ್ದೇವೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ದಿನದ ವೇತನ ನೀಡುತ್ತೇವೆ ಎಂದರು.

ರಾಜ್ಯದಲ್ಲಿ 5.40 ಲಕ್ಷಕ್ಕೂ ಅಧಿಕ ಸರಕಾರಿ ನೌಕರರಿದ್ದು, ಒಂದು ದಿನದ ವೇತನ ಸುಮಾರು 150 ಕೋಟಿ ರೂ. ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು. ಪೊಲೀಸ್ ಹಾಗೂ ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯದ ಎಲ್ಲಾ ನೌಕರರಿಗೆ ಗೃಹೋಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುವಂತೆ ಸರಕಾರಿ ನೌಕರರ ಕ್ಯಾಂಟೀನ್ ಸ್ಥಾಪಿಸಲಾಗುವುದು. ಸರಕಾರಿ, ನ್ಯಾಯಾಲಯ ಹಾಗೂ ವಿವಿಧ ಮೂಲಗಳಿಂದ ಬರುವ ಆದೇಶ ಮತ್ತು ಸಂಘಟನೆಯ ಕಾರ್ಯಗಳು ಹಾಗೂ ಚಟುವಟಿಕೆಗಳನ್ನು ಎಲ್ಲರಿಗೂ ತ್ವರಿತವಾಗಿ ತಲುಪಿಸಲು ಮಾಹಿತಿ ಜಾಲ ಅಭಿವೃದ್ಧಿ ಕೋಶ ತೆರೆಯಲಾಗುವುದು ಎಂದರು.

ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಎಲ್ಲಾ ಇಲಾಖೆಯ ನೌಕರರಿಗೂ ವೃತ್ತಿಕೌಶಲ ಹೆಚ್ಚಿಸಲು ಹೊಸ ಮಾದರಿಯ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು. ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿ ಸರಕಾರಿ ನೌಕರರಿದ್ದು, ಜನರಿಗೆ ಸಮರ್ಪಕವಾಗಿ ಸೇವೆಗಳನ್ನು ನೀಡಲು ತೊಂದರೆಯಾಗುತ್ತಿದೆ. ಹೀಗಾಗಿ, ಮುಖ್ಯಮಂತ್ರಿ ಬಳಿ ಚರ್ಚಿಸಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.40 ಲಕ್ಷ ಹುದ್ದೆಗಳು ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೇ ಪಿಂಚಣಿ ಯೋಜನೆ ಜಾರಿ ತರಲು ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ರೂಪಿಸಲಾಗುವುದು. ಎಲ್ಲಾ ಇಲಾಖೆಯಲ್ಲಿಯೂ ಸ್ಪಷ್ಟ ಹಾಗೂ ಸಮಗ್ರ ವರ್ಗಾವಣೆ ಕಾಯ್ದೆ ಜಾರಿಗೆ, ನೌಕರರ ಜೇಷ್ಠತಾ ಪಟ್ಟಿಯನ್ನು ನಿಯಮಗಳ ಪ್ರಕಾರ ಸಿದ್ಧಪಡಿಸಿ, ಅರ್ಹರಿಗೆ ಕೂಡಲೇ ಮುಂಬಡ್ತಿ ನೀಡಲು ಕ್ರಮವಹಿಸಲಾಗುವುದು ಎಂದು ವಿವರಿಸಿದರು. ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಖಜಾಂಚಿ ಆರ್. ಶ್ರೀನಿವಾಸ ಸೇರಿದಂತೆ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News