ಗದಗ ಜಿಲ್ಲೆಯ 13 ಗ್ರಾಮಗಳಲ್ಲಿ ಪ್ರವಾಹ ಭೀತಿ

Update: 2019-08-09 19:04 GMT

ಗದಗ, ಆ.9: ಗದಗ ಜಿಲ್ಲೆಯಲ್ಲಿ ಹಾದು ಹೋಗಿರುವ ಮಲಪ್ರಭಾ, ತುಂಗಭದ್ರಾ ಹಾಗೂ ಬೆಣ್ಣೆಹಳ್ಳದ ನೀರಿನ ಒಳ ಹರಿವು ಹೆಚ್ಚಿದ್ದು, ನದಿದಂಡೆಯ 13 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ನರಗುಂದ ತಾಲೂಕಿನ ಲಕುಮಾಪುರದಿಂದ ರೋಣ ತಾಲೂಕಿನ ಕುರುವಿನಕೊಪ್ಪ ವ್ಯಾಪ್ತಿಯ ಗ್ರಾಮಗಳಿಗೆ ಯಾವುದೇ ಕ್ಷಣದಲ್ಲಿ ಬೇಕಾದರೂ ಮಲಪ್ರಭಾ ನದಿ ನೀರು ನುಗ್ಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತವು ಈಗಾಗಲೇ ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ನವಿಲುತೀರ್ಥ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಈಗಾಗಲೇ 70 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಇದರಿಂದ ಮಲಪ್ರಭಾ ನದಿಪಾತ್ರದಲ್ಲಿ ಬರುವ ನರಗುಂದ ತಾಲೂಕಿನ ಲಕಮಾಪುರ, ವಾಸನ, ಬೆಳ್ಳೇರಿ, ಬೂದಿಹಾಳ, ಕಪ್ಪಲಗಿ, ಕಲ್ಲಾಪುರ, ಶಿರೋಳ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಈಗಾಗಲೇ ಈ ಗ್ರಾಮಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಕೆಲವರು ಇನ್ನೂ ಗ್ರಾಮಗಳಲ್ಲೇ ಉಳಿದುಕೊಂಡಿದ್ದು, ಅವರನ್ನೂ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ರೋಣ ತಾಲೂಕಿನ ಹೊಳೆ ಆಲೂರು, ಕುರುವಿನಕೊಪ್ಪ, ಹೊಳೆಹಡಗಲಿ, ಹೊಳೆಮಣ್ಣೂರು, ಗಾಡಗೋಳಿ, ಮೆಣಸಗಿ, ಬಿ.ಎಸ್.ಬೇಲೇರಿ, ಗುಳಗುಂದಿ, ಅಮರಗೋಳ ಗ್ರಾಮಗಳು ಮಲಪ್ರಭಾ ಪ್ರವಾಹ ಭೀತಿ ಎದುರಿಸುತ್ತಿದ್ದು, 2010ರಲ್ಲಿ ಇಲ್ಲಿ ಪ್ರವಾಹ ಉಂಟಾದಾಗ ಜಿಲ್ಲಾಡಳಿತವು ಇವರಿಗಾಗಿ 1 ಸಾವಿರಕ್ಕೂ ಹೆಚ್ಚು ಆಸರೆ ಮನೆಗಳನ್ನು ನಿರ್ಮಿಸಿತ್ತು. ಈ ಆಸರೆ ಮನೆಗಳಿಗೆ ಜನರು ಸ್ಥಳಾಂತರಗೊಂಡರು.

ಗಂಜಿ ಕೇಂದ್ರ ಆರಂಭ: ನರಗುಂದ ತಾಲೂಕಿನಲ್ಲಿ 4 ಹಾಗೂ ರೋಣ ತಾಲೂಕಿನಲ್ಲಿ 2 ಸೇರಿ ಒಟ್ಟು 6 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಸದ್ಯ 2,857 ಕುಟುಂಬಗಳ 13,398 ಜನರಿಗೆ ಆಶ್ರಯ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News