×
Ad

ತುಂಗಭದ್ರಾ ಜಲಾಶಯದಿಂದ ಮತ್ತೆ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

Update: 2019-08-11 18:21 IST

ಬಳ್ಳಾರಿ, ಜು.11: ತುಂಗಭದ್ರಾ ಜಲಾಶಯದಿಂದ ರವಿವಾರ ಮತ್ತೆ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಇದರಿಂದ, 10 ಗ್ರಾಮಗಳು ಮುಳುಗಡೆ ಭೀತಿ ಎದುರಿಸುವಂತಾಗಿದೆ. ಈ ಗ್ರಾಮಗಳಲ್ಲಿನ ಜನರನ್ನು ಸ್ಥಳಾಂತರಿಸಲು ಮತ್ತು ಅಗತ್ಯವಿರುವಡೆ ಗಂಜಿ ಕೇಂದ್ರಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

ಶನಿವಾರ ಸಂಜೆ 25 ಸಾವಿರ ಕ್ಯೂಸೆಕ್ ನೀರು ನದಿಗೆ ಜಲಾಶಯದಿಂದ ಹರಿಬಿಡಲಾಗಿತ್ತು. ಅದನ್ನು ಹಂತಹಂತವಾಗಿ ಈಗಾಗಲೇ 1.70 ಲಕ್ಷ ಕ್ಯೂಸೆಕ್ ಪ್ರಮಾಣಕ್ಕೆ ಏರಿಸಲಾಗಿದೆ. ನದಿ ಪಾತ್ರದ ಕೆಲ ಪ್ರದೇಶಗಳು ಹಾಗೂ ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ಕಂಪ್ಲಿ-ಗಂಗಾವತಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ಸಂಪರ್ಕ ಸ್ಥಗಿತಗೊಂಡಿದೆ.

ಹೊಸಪೇಟೆ ತಾಲೂಕಿನ 5 ಮತ್ತು ಕಂಪ್ಲಿ ತಾಲೂಕಿನ 5 ಹಳ್ಳಿಗಳು ಮುಳುಗಡೆ ಭೀತಿ ಎದುರಿಸುತ್ತಿದ್ದು, ಈಗಾಗಲೇ ಜಿಲ್ಲಾಡಳಿತದಿಂದ ನಿಯೋಜಿಸಿದ ತಂಡವು ಗ್ರಾಮಗಳಲ್ಲಿ ಅಗತ್ಯ ಜನಜಾಗೃತಿ ಮೂಡಿಸಿ ಗ್ರಾಮದಲ್ಲಿನ ಜನರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅವಶ್ಯಕತೆ ಇರುವೆಡೆ ಗಂಜಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಪಡಿತರ ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಆಯುಕ್ತ ಪಿ.ಎನ್.ಲೋಕೇಶ್ ತಿಳಿಸಿದರು.

ಕಂಪ್ಲಿ ಶಾಸಕ ಗಣೇಶ ಜತೆಗೂಡಿ ಅಧಿಕಾರಿಗಳ ತಂಡದೊಂದಿಗೆ ಮುಳುಗಡೆಯಾಗಿರುವ ಕಂಪ್ಲಿ ಸೇತುವೆಯ ಸಮೀಪ ನೀರಿನ ಹರಿವಿನ ಪ್ರಮಾಣ ಪರಿಶೀಲಿಸಿ ಮಾತನಾಡಿದರು. ಶನಿವಾರ ಜಲಾಶಯದಿಂದ ಈಗಾಗಲೇ 1.76 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ರವಿವಾರ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News