ಇಳಿಮುಖವಾದ ಮಳೆಯ ಪ್ರಮಾಣ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ, 187 ಜಾನುವಾರುಗಳು ಸಾವು

Update: 2019-08-11 14:09 GMT
ಸಾಂದರ್ಭಿಕ ಚಿತ್ರ

ಧಾರವಾಡ, ಆ.11: ಕಳೆದ ಸುಮಾರು ಒಂಬತ್ತು ದಿನಗಳಿಂದ ಧಾರವಾಡ ಜಿಲ್ಲೆಯಾದ್ಯಂತ ಸುರಿದ ಮಳೆಯ ಪ್ರಮಾಣ ಇಂದು ಇಳಿಮುಖವಾಗಿದೆ. ಅತಿವೃಷ್ಠಿಯಿಂದ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೆ ಏರಿದೆ. 187 ಜಾನುವಾರುಗಳು ಸಾವಿಗೀಡಾಗಿವೆ. 7931 ಮನೆಗಳಿಗೆ ಹಾನಿಯಾಗಿದೆ. ಸುಮಾರು 94 ಪರಿಹಾರ ಕೇಂದ್ರಗಳಲ್ಲಿ 23 ಸಾವಿರಕ್ಕೂ ಅಧಿಕ ಜನರಿಗೆ ಆಶ್ರಯ ಒದಗಿಸಲಾಗಿದೆ. ಜೀವ ಹಾನಿ, ಆಸ್ತಿ-ಪಾಸ್ತಿ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ವಿತರಿಸುವ ಕಾರ್ಯವನ್ನು ಜಿಲ್ಲಾಡಳಿತ ಚುರುಕುಗೊಳಿಸಿದೆ. 

ಕಳೆದ ಹತ್ತು ವರ್ಷಗಳಲ್ಲಿಯೆ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಇದುವರೆಗೆ ಜಿಲ್ಲೆಯಲ್ಲಿ ಕಳೆದ ಎಂಟು ದಿನಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಕಲ್ಲಾಪುರ-ವೀರಾಪುರ ಹಳ್ಳದ ಮಧ್ಯೆ ಕೊಚ್ಚಿ ಹೋಗಿದ್ದ ಸಿದ್ಧಾಪುರ ಗ್ರಾಮದ ಬಸಪ್ಪ ಜ್ಯೋತೆಪ್ಪ ಪಾಟೀಲ(54) ಅವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಧಾರವಾಡ ಜಿಲ್ಲೆಯಾದ್ಯಂತ ಒಟ್ಟು 7931 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 3028 ಮನೆಗಳಿಗೆ 2.21 ಕೋಟಿ ರೂ.ಪರಿಹಾರ ನೀಡಲಾಗಿದೆ. 4903 ಮನೆಗಳಿಗೆ ಪರಿಹಾರ ಸಿದ್ಧಪಡಿಸಲಾಗುತ್ತಿದೆ. 187 ಜಾನುವಾರುಗಳು ಸಾಗೀಡಾಗಿದ್ದು 3.33 ಲಕ್ಷ ರೂ.ಪರಿಹಾರ ನೀಡಲಾಗಿದೆ. 413 ಕಿ.ಮೀ. ರಸ್ತೆ ಹಾನಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News