ಪ್ರವಾಹ ಪೀಡಿತ ವಿರಾಜಪೇಟೆಯಲ್ಲಿ ತಾಯಿ-ಮಗಳ ಶವಸಂಸ್ಕಾರಕ್ಕೆ 8 ಸಾವಿರ ರೂ. ಬೇಡಿಕೆ !

Update: 2019-08-11 15:44 GMT

► ಕಾನೂನು ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ  

ಮಡಿಕೇರಿ, ಆ.11: ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ಮಹಾಮಳೆಯಿಂದ ಆ.9 ರಂದು ಗುಡ್ಡ ಕುಸಿದು ಮೃತಪಟ್ಟ ಮಮತಾ ಹಾಗೂ ಮಗಳು ಲಿಖಿತಾ ಅವರ ಮೃತದೇಹದ ಸಂಸ್ಕಾರಕ್ಕೆ ಕೆಲವು ವ್ಯಕ್ತಿಗಳು 8 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿರಾಜಪೇಟೆ ತಾಲೂಕು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ.

ಮೃತ ಮಮತಾ ಅವರ ಸಂಬಂಧಿಕರು ಶವಗಳ ಸಂಸ್ಕಾರಕ್ಕೂ ಮೊದಲು ಕಣ್ಣೀರಿಡುತ್ತಾ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. “ನಾವು ಎಲ್ಲವನ್ನು ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ಬಂದಿದ್ದೇವೆ, ನಮ್ಮ ಬಳಿ ಏನೂ ಉಳಿದಿಲ್ಲ. ಆದರೂ ಇಬ್ಬರ ಶವ ಸಂಸ್ಕಾರಕ್ಕೆ ಎಂಟು ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. 

ವಿಡಿಯೋ ಯಾರು ಚಿತ್ರೀಕರಣ ಮಾಡಿದ್ದರು ಮತ್ತು ಹಣಕ್ಕಾಗಿ ಯಾರು ಬೇಡಿಕೆ ಇಟ್ಟಿದ್ದರು ಎನ್ನುವ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿರಲಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಪ್ರಾಥಮಿಕ ತನಿಖೆ ನಡೆಸಿದ ಸಂದರ್ಭ ವಿರಾಜಪೇಟೆಯ ಹಿಂದೂರುದ್ರ ಭೂಮಿಯಲ್ಲಿ ಕೆಲವು ವ್ಯಕ್ತಿಗಳು ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸಂತ್ರಸ್ತರ ಶವಗಳನ್ನು ರುದ್ರಭೂಮಿಗೆ ತರುವ ಸಂದರ್ಭ ರುದ್ರಭೂಮಿಯ ಗೇಟ್‍ಗೆ ಬೀಗ ಹಾಕಲಾಗಿತ್ತು. ಬೀಗವನ್ನು ಒಡೆದು ಒಳ ಪ್ರವೇಶಿಸಿದಾಗ ಯಾರದ್ದೋ ಶವ ಸಂಸ್ಕಾರಕ್ಕೆ ಮೊದಲೇ ಗುಂಡಿ ತೋಡಲಾಗಿತ್ತು. ಈ ಗುಂಡಿಯಲ್ಲಿ ಸಂಸ್ಕಾರ ಮಾಡಲು ಸ್ಮಶಾನದಲ್ಲಿದ್ದ ಕೆಲವರು ಎಂಟು ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಮೊದಲೇ ಸಂಕಷ್ಟದಲ್ಲಿದ್ದ ಕುಟುಂಬ ಹಣ ನೀಡಲಾಗದೆ ಪಕ್ಕದಲ್ಲೇ ಬೇರೆ ಸ್ಥಳದಲ್ಲಿ ಶವ ಸಂಸ್ಕಾರ ನಡೆಸಿದ್ದಾರೆ. ಆದರೆ ಯಾರು ಹಣಕ್ಕೆ ಬೇಡಿಕೆ ಇಟ್ಟರು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿರುವ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಮೂಲಕ ಪೊಲೀಸ್ ಇಲಾಖೆಗೆ ದೂರು ನೀಡಿದ್ದು, ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ. 

ಅಲ್ಲದೆ ಇಬ್ಬರಿಗೆ ಪರಿಹಾರವಾಗಿ ತಲಾ 5 ಲಕ್ಷ ರೂ.ಗಳಂತೆ ಒಟ್ಟು 10 ಲಕ್ಷ ರೂ. ಹಾಗೂ ಶವಸಂಸ್ಕಾರಕ್ಕೆ 10 ಸಾವಿರ ರೂ. ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ
ಈ ವಿಡಿಯೋ ಇಂದು ಹರಿದಾಡುತ್ತಿದೆ. ಆದ್ರೆ ನಿನ್ನೆ 3 ಗಂಟೆಗೆ ಅಂತ್ಯ ಸಂಸ್ಕಾರ ನಡೆದಿದ್ದು, ಮಮತಾ ಮತ್ತು ಲಿಖಿತಾ ಅವರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 4 ಹಾಗು ರಾಜ್ಯದಿಂದ 1 ಲಕ್ಷದ (ಒಟ್ಟು 10 ಲಕ್ಷದ) ಚೆಕ್ಕನ್ನು ನೀಡಲಾಗಿದೆ. ಯಾರೂ ಹಣ ಕೇಳಿದ ವಿಚಾರವನ್ನು ಗಮನಕ್ಕೆ ತಂದಿರಲಿಲ್ಲ, ನನ್ನ ಕ್ಷೇತ್ರದ 4 ತಾಲೂಕುಗಳು ಜಲಾವೃತಗೊಂಡಿವೆ, ಒಂದೇ ಕಡೆ ಇರುವುದಕ್ಕಾಗುವುದಿಲ್ಲ, ಲೋಪಗಳಿದ್ದರೆ ಆರೋಪದ ಬದಲು ಗಮನಕ್ಕೆ ತನ್ನಿ. ಸ್ಪಂದಿಸದಿದ್ದರೆ, ಮನಸ್ಸೋ ಇಚ್ಛೆ ಮಾತಾಡಿ, ಪರವಾಗಿಲ್ಲ. ನಮ್ಮ ಇಬ್ಬರು ಶಾಸಕರಾದ ಬೋಪಯ್ಯ ಮತ್ತು ರಂಜನ್ ಅವರು ಕಾರ್ಯಕರ್ತರ ಪಡೆಯೊಂದಿಗೆ ಕೊಡಗಿನಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ನೀನು ಹುಣಸೂರು ಪಿರಿಯಾಪಟ್ಟಣದ ಬಗ್ಗೆ ಗಮನಹರಿಸು ಎಂದು ಬೋಪಯ್ಯನವರು ಸೂಚಿಸಿದ ಕಾರಣ ಇಲ್ಲಿ ಹೆಚ್ಚು ಸಮಯ ನೀಡುತ್ತಿದ್ದೇನೆ. ಯಾರೂ ತಪ್ಪು ಭಾವಿಸಬೇಡಿ. ನಮ್ಮ ಮುಖ್ಯಮಂತ್ರಿ ಬಿ.ಯೆಸ್.ವೈ. ಮೈಸೂರು-ಚಾಮರಾಜನಗದ ವರದಿ ಕೊಡುವಂತೆ ಆದೇಶ ಮಾಡಿದ್ದಾರೆ, ನಾವ್ಯಾರೂ ಸಬೂಬು ಹೇಳುತ್ತಾ ಕುಳಿತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News