ಗುಡ್ಡ ಕುಸಿತ: ಎಂಟು ಮಂದಿಯ ಪತ್ತೆಗಾಗಿ ಶೋಧ ಕಾರ್ಯ ತೀವ್ರ

Update: 2019-08-11 17:54 GMT

ಮಡಿಕೇರಿ, ಆ.11: ವೀರಾಜಪೇಟೆ ತಾಲೂಕಿನ ಹೆಗ್ಗಳ ಬಳಿಯ ತೋರ ಗ್ರಾಮದಲ್ಲಿ ಗುಡ್ಡ ಕುಸಿತಕ್ಕೆ ಸಿಲುಕಿ ನಾಪತ್ತೆಯಾಗಿರುವ ಎಂಟು ಮಂದಿಯ ಪತ್ತೆಗಾಗಿ ರಕ್ಷಣಾ ತಂಡಗಳಿಂದ ಪ್ರತಿಕೂಲ ಪರಿಸ್ಥಿತಿಗಳ ನಡುವೆ ಶೋಧ ಕಾರ್ಯ ನಡೆಯುತ್ತಿದೆ.

ಮಹಾಮಳೆಗೆ ಸಿಲುಕಿ ಕಳೆದ ಶುಕ್ರವಾರ ತೋರ ಗ್ರಾಮದಲ್ಲಿ ಬೆಟ್ಟ ಪ್ರದೇಶ ಭಾರೀ ಕುಸಿತಕ್ಕೆ ಒಳಗಾಗಿ ಇಬ್ಬರು ಸಾವನ್ನಪ್ಪಿ, ಎಂಟು ಮಂದಿ ನಾಪತ್ತೆಯಾಗಿದ್ದರು. ಭಾರೀ ಮಳೆಯಿಂದ ರಕ್ಷಣಾ ತಂಡಗಳಿಗೆ ದುರ್ಘಟನೆ ನಡೆದ ಸ್ಥಳಕ್ಕೆ ತೆರಳುವುದೇ ಅಸಾಧ್ಯವಾಗಿ ಪರಿಣಮಿಸಿತ್ತಾದರೂ, ಸಾಹಸಿಕ ಪ್ರಯತ್ನದ ಮೂಲಕ ಸ್ಥಳಕ್ಕೆ ತೆರಳಿದ ರಕ್ಷಣಾ ತಂಡ ತಾಯಿ ಮಗಳ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಉಳಿದವರ ಪತ್ತೆಕಾರ್ಯ ಸಾಧ್ಯವಾಗಿಲ್ಲ.

ಎಲ್ಲೆಲ್ಲೂ ಕೆಸರು-ಕಠಿಣ ಕಾರ್ಯಾಚರಣೆ- ದುರ್ಘಟನೆ ನಡೆದು ದಿನಕಳೆದರು ನಾಪತ್ತೆಯಾದವರ ಪತ್ತೆ ಸಾಧ್ಯವಾಗಿರಲಿಲ್ಲ. ಭಾನುವಾರ ಬೆಳಗ್ಗಿನಿಂದಲೆ ಸೈನ್ಯದ ತುಕಡಿ, ಎನ್‍ಡಿಆರ್‍ಎಫ್, ಪೊಲೀಸ್ ತಂಡಗಳು ಕಾರ್ಯಾಚರಣೆಗೆ ಇಳಿದವಾದರು, ಇನ್ನೂರು ಏಕರೆ ವ್ಯಾಪ್ತಿಯಲ್ಲಿ ಕುಸಿದ ಗುಡ್ಡ ಪ್ರದೇಶದಲ್ಲಿನ ಕೆಸರಿನಿಂದಾಗಿ ಶೋಧ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ.

ಸ್ಥಳದಲ್ಲಿ ಎರಡು ಹಿಟಾಚಿಗಳ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಭೂ ಕುಸಿತ ಎಷ್ಟರ ಮಟ್ಟಿಗೆ ಭೀಕರವಾಗಿದೆಯೆಂದರೆ ಗುಡ್ಡ ಕುಸಿತಕ್ಕೆ ಸಿಲುಕಿ ನಾಶವಾದ ಮನೆಗಳ ಗುರುತು ಪತ್ತೆಯೇ ಸಾಧ್ಯವಾಗುತ್ತಿಲ್ಲ.

ನನ್ನ ದೌರ್ಭಾಗ್ಯ- ದುರ್ಘಟನೆಯಲ್ಲಿ ತಾಯಿ ದೇವಕ್ಕಿ, ಪತ್ನಿ ಅನು, ಮಕ್ಕಳಾದ ಅಮೃತ(13) ಹಾಗೂ ಆದಿತ್ಯ(10) ಅವರನ್ನು ಕಳೆದುಕೊಂಡಿರುವ ಪ್ರಭು ಅವರು, ಕ್ಷಣಾರ್ಧದಲ್ಲಿ ನಡೆದು ಹೋಗಿರುವ ಘಟನೆಯಿಂದ ನನ್ನ ಸಂಸಾರ ನಾಶವಾಗಿದೆ. ಇದು ನನ್ನ ದೌರ್ಭಾಗ್ಯವೆಂದು ನೋವನ್ನು ತೋಡಿಕೊಂಡಿದ್ದಾರೆ.
ಪ್ರಭು ಅವರ ಕುಟುಂಬದ ನಾಲ್ವರು ಸದಸ್ಯರೊಂದಿಗೆ ಭೂ ಕುಸಿತದ ದುರ್ಘಟನೆಯಲ್ಲಿ ಶಂಕರ, ಅಪ್ಪು, ಲೀಲಾ, ಹರೀಶ ಎಂಬವರ ಪತ್ನಿ ಹೀಗೆ ನಾಲ್ವರು ನಾಪತ್ತೆಯಾಗಿದ್ದಾರೆ. ಇವರೆಲ್ಲರ ಪತ್ತೆ ಕಾರ್ಯಕ್ಕಾಗಿ ಪ್ರಯಾಸದ ಕಾರ್ಯಾಚರಣೆ ಪ್ರಗತಿಯಲ್ಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News