ಕುಶಾಲನಗರ, ಕೊಪ್ಪ ಭಾಗದಲ್ಲಿ 500ಕ್ಕೂ ಹೆಚ್ಚು ಮನೆಗಳು ಜಲಾವೃತ

Update: 2019-08-11 17:58 GMT

ಮಡಿಕೇರಿ, ಆ.11: ಕುಶಾಲನಗರ ಹಾಗೂ ಕೊಪ್ಪ ವ್ಯಾಪ್ತಿಯಲ್ಲಿ ಕಾವೇರಿಯ ಪ್ರವಾಹದ ಅಬ್ಬರಕ್ಕೆ ಸುಮಾರು 500ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಕುಶಾಲನಗರದಲ್ಲಿ ಕಾವೇರಿ ನದಿ ನೀರಿನ ಪ್ರವಾಹದಿಂದಾಗಿ ಭಾನುವಾರವೂ ರಾಷ್ಟ್ರೀಯ ಹೆದ್ದಾರಿ ಬಂದ್ ಅಗಿತ್ತು.

ಕೊಪ್ಪ ಮತ್ತು ಕುಶಾಲನಗರ ಕಡೆಗೆ ಬರುವ ಜನರಿಗೆ ಬೋಟ್ ಮೂಲಕ ಸಾಗಿಸುವ ಕಾರ್ಯ ನಡೆಯುತ್ತಿದೆ.                            

ಕುಶಾಲನಗರ ಸಮೀಪದ ತಾವರೆಕರೆ ಹತ್ತಿರ ಬಳಿ ರಸ್ತೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದರೂ, ಶನಿವಾರ ರಾತ್ರಿ ಚಾಲಕನೊಬ್ಬ ಬಸ್‍ನ್ನು ದಾಟಿಸಲು ಮುಂದಾಗಿ ನೀರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಬಳಿಕ ಕುಶಾಲನಗರ ಡಿವೈಎಸ್‍ಪಿ ಮುರಳೀಧರ್ ಮತ್ತು ತಂಡದವರು ಬಸ್‍ನಲ್ಲಿದ್ದ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದರು.

ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಕಾವೇರಿ- ಹಾರಂಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕೂಡಿಗೆ, ಕೂಡ್ಲೂರು, ಮುಳ್ಳಸೋಗೆ ಕೂಡುಮಂಗಳೂರು, ಹೆಬ್ಬಾಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 350ಕ್ಕೂ ಹೆಚ್ಚು ಮನೆಗಳು ಜಲಾವೃತ ಗೊಂಡಿವೆ.

ಕೂಡುಮಂಗಳೂರು ಗ್ರಾಮ ಪಂಚಾಯತ್ ನ ವಿವೇಕಾನಂದ ಬಡಾವಣೆಯ 50 ಮನೆಗಳು, ಕೂಡ್ಲೂರು ಬಡಾವಣೆ 36 ಮನೆ, ಕೂಡಿಗೆಯಲ್ಲಿ ಹಾರಂಗಿ ತಟದಲ್ಲಿರುವ 60 ಮನೆಗಳು, ಮುಳ್ಳಸೋಗೆ ಗ್ರಾಮ ಪಂಚಾಯತ್ ನ 3 ಬಡಾವಣೆ ಗಳು ಸೇರಿದಂತೆ 150ಕ್ಕೂ ಹೆಚ್ಚು ಮನೆಗಳು ಶನಿವಾರ ಜಲಾವೃತಗೊಂಡಿದ್ದು, ಭಾನುವಾರವೂ ಪ್ರವಾಹ ಪರಿಸ್ಥಿತಿ ಮುಂದುವರಿದಿತ್ತು. ಈ ಜಲಾವೃತಗೊಂಡ ಪ್ರದೇಶದ ಜನರಿಗೆ ಕೂಡಿಗೆ ಸರಕಾರಿ ಪ್ರಾಥಮಿಕ ಶಾಲೆ ಯಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ.    

ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪರಿಹಾರ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.   

ಜಿ.ಪಂ. ಸದಸ್ಯರ ಮನೆಗೆ ಹಾನಿ
ಕೊಡಗು ಜಿಲ್ಲಾ ಪಂಚಾಯತ್  ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಕೆ,ಪಿ. ಚಂದ್ರಕಲಾ ಅವರ ಮನೆ ಕಾವೇರಿ ನದಿ ನೀರಿನಿಂದ ಆವೃತವಾಗಿದೆ. ಗುಮ್ಮನಕೂಲ್ಲಿ ಗ್ರಾಮಕ್ಕೆ ಕಾವೇರಿ ನದಿ ನೀರು ನುಗ್ಗಿದ ಪರಿಣಾಮ ಚಂದ್ರಕಲಾ ಅವರ ಮನೆ ಮತ್ತು ಅವರಿಗೆ ಸೇರಿದ ತೋಟ ಮುಳುಗಡೆಗೊಂಡಿದೆ. ನೀರು ಅತಿ ವೇಗವಾಗಿ ನುಗ್ಗಿದ ಪರಿಣಾಮ ಮನೆಯ ಯಾವುದೇ ಸಾಮಗ್ರಿಗಳನ್ನು ಸಾಗಾಟ ಮಾಡಲು ಸಾದ್ಯವಾಗಲಿಲ್ಲ ಎಂದು ಚಂದ್ರಕಲಾ ತಿಳಿಸಿದ್ದಾರೆ.

ಗೊಬ್ಬರ ಗೋದಾಮಿಗೂ ಹಾನಿ: ಹಾರಂಗಿ ನದಿ ತಟದಲ್ಲಿರುವ  ಕೂಡಿಗೆಯ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘದ ಗೊಬ್ಬರದ ಗುದ್ದಮು ನೀರಿನಿಂದ ಜಲಾವೃತಗೊಂಡಿದೆ. ಈ ಬಾರಿ ಕಾವೇರಿ- ಹಾರಂಗಿ ಸಂಗಮ ಸ್ಥಳದಲ್ಲಿ ನೀರು ಅಧಿಕಗೊಂಡು ಕೂಡಿಗೆ ಸೇತುವೆ ಕಡೆಗೆ ತಳ್ಳಲ್ಪಟ್ಟ ಹಿನ್ನೆಲೆಯಲ್ಲಿ ಗೊಬ್ಬರ ಸಂಗ್ರಹ ಮಾಡಿದ ಗೋದಾಮಿಗೆ ಒಂದೇ ಸಮನೆ ನೀರು ನುಗ್ಗಿ ಗೋದಾಮಿನಲ್ಲಿದ್ದ ಗೊಬ್ಬರದ ಮೂಟೆಗಳು ನೀರಿನಲ್ಲಿ ಮುಳುಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.  

ಸೇತುವೆಗೆ ಹಾನಿ: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಕಾವೇರಿ ನದಿ  ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಕಾವೇರಿ- ಹಾರಂಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ತೂಗು ಸೇತುವೆಯ ಮೇಲೆ ಹರಿಯುತ್ತಿತ್ತು. ಶನಿವಾರ ಅಪರಾಹ್ನ ನೀರು ಹೆಚ್ಚಾದ ಪರಿಣಾಮ ತೂಗು ಸೇತುವೆಯ ಮೆಟ್ಟಿಲುಗಳು ನೀರಿನಲ್ಲಿ ಕೊಚ್ಚಿಹೋಗಿದೆ. ಅಲ್ಲದೆ  ಒಂದು ಭಾಗದ ಕಬ್ಬಿಣದ ಸರಳುಗಳು ತುಂಡಾಗಿ ಕೊಚ್ಚಿ ಹೋಗಿದೆ. ಈ ತೂಗು ಸೇತುವೆಯು ಪಿರಿಯಾಪಟ್ಟಣ ತಾಲೂಕಿನ 10 ಗ್ರಾಮಗಳಿಗೆ ಕೊಡಗಿನೊಂದಿಗೆ ಸಂಪರ್ಕಿಸುವ ಪ್ರಮುಖ ಸಂಪರ್ಕ ಸೇತುವೆಯಾಗಿತ್ತು. 

ಭಾರೀ ಮಳೆಯಿಂದಾಗಿ ನೀರಿನಿಂದ ಮುಳುಗಡೆಗೊಂಡಿದ್ದ ಕುಶಾಲನಗರದ ವಿವಿಧ ಬಡಾವಣೆಗಳಲ್ಲಿ ಭಾನುವಾರ ಸಂಜೆ ನೀರಿನ ಪ್ರಮಾಣ ಇಳಿಮುಖವಾಗಿದ್ದು, ವಾಹನ ಸಂಚಾರ ಪುನರಾರಂಭವಾಗಿದೆ.

ಕುಶಾಲನಗರ-ಮೈಸೂರು ರಸ್ತೆ, ಕೂಡಿಗೆ-ಕಣಿವೆ ರಸ್ತೆ, ಕುಶಾಲನಗರ-ಹೆಬ್ಬಾಲೆ ರಸ್ತೆಯಲ್ಲಿ ವಾಹನ ಸಂಚಾರ ಪ್ರಾರಂಭವಾಗಿದೆ. ಮಳೆಯ ಆರ್ಭಟದಿಂದ ನದಿ ತಟದಲ್ಲಿರುವ ಬಡಾವಣೆಗಳಲ್ಲಿ ನೀರು ಕಡಿಮೆಯಾಗುತ್ತಾ ಬರುತ್ತಿದ್ದು, ಸಂತ್ರಸ್ತರ ಮೊಗದಲ್ಲಿ ಮಂದಹಾಸ ಮೂಡಿದೆ. ಭಾನುವಾರ ಸಂಜೆ ವೇಳೆಗೆ ಸುಮಾರು ಎರಡರಿಂದ ಐದು ಅಡಿಗಳಷ್ಟು ನೀರು ಇಳಿಮುಖವಾಗಿದೆ.  

ಕುಶಾಲನಗರ ಪ.ಪಂ. ವತಿಯಿಂದ ನಾಲ್ಕು ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದುರ್ವಾಸನೆಯಿಂದ ಕೂಡಿರುವ ಪ್ರದೇಶಗಳಿಗೆ ಪಂಚಾಯತ್ ವತಿಯಿಂದ ಬ್ಲೀಚಿಂಗ್ ಪೌಡರ್‍ಗಳನ್ನು ಸಿಂಪಡಿಸಲಾಗಿದೆ. ನೀರು ಆವರಿಸಿರುವ ಕಾರಣ ಅಲ್ಲಲ್ಲಿ ವಿದ್ಯುತ್ ಸಮಸ್ಯೆಗಳು ಎದುರಾಗಿದೆ. ಕೆಲವರು ಜನರೇಟರ್ ಗಳನ್ನು ಅವಲಂಬಿಸಿದ್ದರೆ, ಬಡ ಕುಟುಂಬಸ್ಥರು ವಿದ್ಯುತ್‍ಗಾಗಿ ಪರಿತಪಿಸುತ್ತಿದ್ದಾರೆ.

ನಿರಾಶ್ರಿತರ ಕೇಂದ್ರವಾದ ಕುಶಾಲನಗರದ ವಾಸವಿ ಮಹಲ್‍ನಲ್ಲಿ ಸಂತ್ರಸ್ತರು ಆಶ್ರಯ ಪಡೆಯುತ್ತಿದ್ದು, ಜಿಲ್ಲಾಡಳಿತದ ವತಿಯಿಂದ ಮೂಲಭೂತ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ. ಗುಡ್ಡೆಹೊಸೂರು ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರವನ್ನು ಸ್ಥಾಪಿಸಿದ್ದು, ಅನುಕೂಲಕ್ಕೆ ತಕ್ಕಂತೆ ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ.

ಭಾನುವಾರ ಬೆಳಗ್ಗೆ ಕುಶಾಲನಗರದ ಕೊಪ್ಪ ಗೇಟ್ ಬಳಿ ಸಿಲುಕಿಕೊಂಡಿದ್ದ ವಾಹನವನ್ನು ರಸ್ತೆ ಬದಿಗೆ ಸರಿಸಲು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಹರ ಸಾಹಸ ಪಟ್ಟರು. ಈ ಸಂದರ್ಭ ಕೊಪ್ಪ ಮತ್ತು ಕೊಡಗು ಗಡಿಯ ಎರಡು ಕಡೆಯಿಂದಲೂ ಜನರು ಹೊಳೆ ದಾಟಲು ಪ್ರಯತ್ನಿಸುತ್ತಿದ್ದುದನ್ನು ಗಮನಿಸಿದ ಶಾಸಕರು ಹಗ್ಗದ ಸಹಾಯದಿಂದ ಹಾಗೂ ತಂಡದ ಜೀಪಿನ ಮೂಲಕ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಿದರು.

ಮಾದಾಪಟ್ಟಣದಲ್ಲಿ ಮನೆಯೊಂದು ಬಿದ್ದು ಹೋಗಿದ್ದು, ಈ ಸಂದರ್ಭ ಮನೆಯೊಳಗಿದ್ದ ಗೃಹೋಪಯೋಗಿ ವಸ್ತುಗಳನ್ನು ತಂಡದ ಸಹಾಯದಿಂದ ಹೊರ ತೆಗೆಯಲಾಯಿತು.

ಕುಶಾಲನಗರ ಮತ್ತು ಮಾದಾಪಟ್ಟಣದ ಪರಿಹಾರ ಕೇಂದ್ರಕ್ಕೆ ಆಗಮಿಸಿದ ಶಾಸಕರು ಅಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಯಿತು.
ಮುಖ್ಯ ರಸ್ತೆ ಬಂದ್ ಆಗಿದ್ದರಿಂದ ಗ್ರಾಮೀಣ ರಸ್ತೆಯಾದ ಮಾದಾಪಟ್ಟಣದಲ್ಲಿ ವಾಹನವೊಂದು ಚರಂಡಿಗೆ ಬಿದ್ದಿದ್ದು, ಈ ಸಂದರ್ಭ ಅದನ್ನು ಸರಿಪಡಿಸಲಾಯಿತು. ನಂತರ ಗಂಧದ ಕೋಟೆ ಗ್ರಾಮದಲ್ಲಿ ಪರಿಶೀಲನೆ ನಡೆಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News