ಆಲೇಕಾನ್, ಹೊರಟ್ಟಿಯಲ್ಲಿ ಸಿಲುಕಿದ್ದ 78 ಸಂತ್ರಸ್ತರನ್ನು ರಕ್ಷಿಸಿದ ಯೋಧರು

Update: 2019-08-13 08:47 GMT

ಚಿಕ್ಕಮಗಳೂರು, ಆ.11: ಹೇಮಾವತಿ ನದಿ ಪ್ರವಾಹದಿಂದ ಆಲೇಖಾನ್ ಮತ್ತು ಹೊರಟ್ಟಿ ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಗ್ರಾಮಸ್ಥರನ್ನು ಯೋಧರ ಪಡೆ ರವಿವಾರ ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದೆ.   

ರವಿವಾರ ಬೆಳಗ್ಗೆ 8 ಗಂಟೆಗೆ ಕಾರ್ಯಚರಣೆಗೆ ಆರಂಭಿಸಿದ ಯೋಧರ ತಂಡ ಸತತ 5ರಿಂದ 6 ಗಂಟೆಗಳ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಗೆ ಹೇಮಾವತಿ ನದಿಯಲ್ಲಿ ಪ್ರವಾಹ ಅಪಾಯದಟ್ಟ ಮೀರಿ ಹರಿದು ಪ್ರವಾಹ ಉಂಟುಮಾಡಿತ್ತು. ಅದರಲ್ಲೂ ಕಳೆದ ಮೂರು ದಿನಗಳ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಆಲೇಖಾನ್ ಮತ್ತು ಹೊರಟ್ಟಿ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ದೊಡ್ಡ ಪ್ರಮಾಣದಲ್ಲಿ ಗುಡ್ಡದ ಮಣ್ಣು ಹಾಗೂ ಮರಗಳು ಬಿದ್ದ ಪರಿಣಾಮ ಸಂಪರ್ಕ ಕಡಿತಗೊಂಡು ತಮ್ಮನ್ನು ರಕ್ಷಿಸುವಂತೆ ಜಿಲ್ಲಾಡಳಿತವನ್ನು ಪರಿ ಪರಿಯಾಗಿ ಬೇಡಿಕೊಂಡಿದ್ದರು.

ಶುಕ್ರವಾರ ಮತ್ತು ಶನಿವಾರ ಜಿಲ್ಲಾಡಳಿತ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರೂ ರಸ್ತೆಯ ಮೇಲೆ ಹಲವು ಕಡೆ ಅಪಾರ ಪ್ರಮಾಣದ ಗುಡ್ಡದ ಮಣ್ಣು ಹಾಗೂ ಮರ ಬಿದ್ದಿದ್ದರಿಂದ ಆಲೇಖಾನ್, ಹೊರಟ್ಟಿ ಗ್ರಾಮವನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ತಮ್ಮ ಪ್ರಯತ್ನವನ್ನು ಕೈ ಚಲ್ಲಿದ ಜಿಲ್ಲಾಡಳಿತ ಇರವ ರಕ್ಷಣೆಗೆ ಹೆಲಿಕ್ಯಾಪ್ಟರ್ ಹಾಗೂ ಯೋಧರನ್ನು ಕಳಿಸುವಂತೆ ರಾಜ್ಯಸರಕಾರದ ಮೊರೆ ಹೋಗಿದ್ದರು. 

ಜಿಲ್ಲಾಡಳಿತದ ಕೋರಿಕೆಗೆ ಸ್ಪಂಧಿಸಿದ ರಾಜ್ಯಸರಕಾರ ಶನಿವಾರ ಸಂಜೆ ಅರೆಸೇನೆ ಪಡೆಯ ಯೋಧರ ತಂಡವನ್ನು ಮೂಡಿಗೆರೆಗೆ ಕಳಿಸಿತ್ತು. ಅದರೊಂದಿಗೆ ಒಂದು ಹೆಲಿಕ್ಯಾಪ್ಟರನ್ನು ರವಿವಾರ ಬೆಳಗ್ಗೆ ಕಳಸಿಕೊಟ್ಟಿದ್ದು, ಹವಮಾನ ವೈಪರೀತ್ಯದಿಂದ ಲ್ಯಾಂಡ್ ಮಾಡಲು ಸಾಧ್ಯವಾಗದೆ ಹೆಲಿಕ್ಯಾಪ್ಟರ್ ಮರಳಿದೆ.

ರವಿವಾರ ಬೆಳಿಗ್ಗೆ 8 ಗಂಟೆಯಿಂದ ಗುಡ್ಡಗಾಡು ಪ್ರದೇಶದಲ್ಲಿ 4ರಿಂದ5 ಕಿ.ಮೀ ರಸ್ತೆ ಮಾಡಿಕೊಂಡು ಆಲೇಖಾನ್, ಹೊರಟ್ಟಿ ಗ್ರಾಮವನ್ನು ಪ್ರವೇಶಿಸಿ ರ್ಯಾಕ್ ಮತ್ತು ಹಗ್ಗದ ಸಹಾಯದಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಹೊರತಂದರೆ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧರನ್ನು ಯೋಧರು ನಾಲ್ಕೈದು ಕಿ.ಮೀ. ಹೆಗಲ ಮೇಲೆ ಹೊತ್ತು ತಂದಿದ್ದಾರೆ. ಯೋಧರಿಂದ ರಕ್ಷಿಸಲ್ಪಟ್ಟ ಜನರು ಕೊಟ್ಟಿಗೆಹಾರದಲ್ಲಿ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರದಲ್ಲಿ ಬಿಡಲಾಗಿದೆ. ಕಳೆದೆರೆಡು ದಿನಗಳಿಂದ ದುರ್ಗಮ ಪ್ರದೇಶದಿಂದ ಹೊರ ಬರಲಾಗದೇ ಕಾಡಿನ ಮಧ್ಯೆ ಸಿಲುಕಿಕೊಂಡಿದ್ದ ಜನರ ರಕ್ಷಣೆಗೆ ರವಿವಾರ ಮುಂದಾಗಿದ್ದ ಯೋಧರ ಪಡೆ ಸುಮಾರು 4ರಿಂದ 5 ಕಿ.ಮೀ. ಗುಡ್ಡದಲ್ಲಿ ರಸ್ತೆ ಮಾಡಿಕೊಂಡು ಆಲೇಖಾನ್, ಹೊರಟ್ಟಿ ಗ್ರಾಮವನ್ನು ತಲುಪಿ ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಸುಮಾರು 78 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News