ಯಡಿಯೂರಪ್ಪಗೆ ದೇವರು ಬುದ್ದಿ ಕೊಡಲಿ:ಎಚ್.ಡಿ.ಕುಮಾರಸ್ವಾಮಿ

Update: 2019-08-12 08:37 GMT

ಹಾಸನ, ಆ.12: ರಾಜ್ಯದ ಜನರ ತೆರಿಗೆ ಹಣದಿಂದ ಬೊಕ್ಕಸ ಸುಭದ್ರವಾಗಿದೆ. ಇದನ್ನು ದೇವರು ಕಾಪಾಡಬೇಕಿಲ್ಲ. ಬದಲಾಗಿ  ಹಣವನ್ನು ವಿನಿಯೋಗ ಮಾಡುವುದು ಹೇಗೆ ಎಂಬ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೇ ದೇವರು ಬುದ್ಧಿ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಹಾಸನ ನಗರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ದೇವರೇ ಕಾಪಾಡಬೇಕು ಎಂದು ಸಿ.ಎಂ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಹಣವನ್ನು ವಿನಿಯೋಗ ಮಾಡುವುದು ಹೇಗೆ ಎಂಬ ಬಗ್ಗೆ ಅವರಿಗೇ ದೇವರು ಬುದ್ಧಿ ಕೊಡಲಿ ಎಂದು ಹೇಳಿದರು.

ರಾಜ್ಯ ಬಿಜೆಪಿ ಸರಕಾರದಲ್ಲಿ ಸಚಿವ ಸಂಪುಟ ರಚನೆಗೂ ಮುನ್ನವೇ ಪ್ರಮುಖ ಇಲಾಖೆಗಳ ಅಧಿಕಾರಿಗಳ ಸ್ಥಳ ನಿಯೋಜನೆಗಾಗಿ ಬಿಡ್ಡಿಂಗ್ ನಡೆಯುತ್ತಿದೆ. ಕೇವಲ ರಾಜಕೀಯಕ್ಕಾಗಿ ಆರೋಪ ಮಾಡುತ್ತಿಲ್ಲ. ವಿರೋಧ ಪಕ್ಷದ ಒಬ್ಬ ನಾಯಕನಾಗಿ ಸಲಹೆ ನೀಡುತ್ತಿದ್ದೇನೆ. 14 ತಿಂಗಳು ಎಂದೂ ನನ್ನ ಕಚೇರಿಯನ್ನು ಮಾರ್ಕೆಟ್ ರೀತಿ ಮಾಡಿರಲಿಲ್ಲ. ಮುಖ್ಯ ಕಾರ್ಯದರ್ಶಿ ಸೇರಿ, ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿದ್ದು, ಅವರನ್ನು ವಿಶ್ವಾಸಕ್ಕೆ ಪಡೆಯಿರಿ ಎಂದು ಸಲಹೆ ನೀಡಿದರು.

ರಾಜ್ಯದ ನೆರೆಹಾವಳಿ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಶಾ ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದಾರೆ. ಆದರೆ, ಯಾರೊಬ್ಬರೂ ಸಂಕಷ್ಟದಲ್ಲಿರುವ ನಾಡಿನ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಭರವಸೆ ನೀಡಿಲ್ಲ. ಪರಿಹಾರ ಘೋಷಣೆ ಭರವಸೆ ನೀಡಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News